ಕರ್ನಾಟಕ

karnataka

ETV Bharat / state

ಗುತ್ತಿಗೆದಾರ ಸಚಿನ್ ಸಾವು ಪ್ರಕರಣ: ಪ್ರಿಯಾಂಕ್​ ಖರ್ಗೆ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹ - CONTRACTOR DEATH

ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡದೇ ಇದ್ದರೆ ಕಲಬುರಗಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

Contractor Death: BJP sticks to demand for CBI probe and Priyank Kharge resignation
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು (ETV Bharat)

By ETV Bharat Karnataka Team

Published : Dec 30, 2024, 2:17 PM IST

ಬೆಂಗಳೂರು:ಗುತ್ತಿಗೆದಾರ ಸಚಿನ್ ಸಾವಿನ ಪ್ರಕರಣದ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಪಡೆದು, ದುರ್ಘಟನೆಯ ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಕ್ಕಾಗಿ ಸಿಬಿಐ ತನಿಖೆಗೆ ಸಚಿನ್ ಕುಟುಂಬವೂ ಒತ್ತಾಯಿಸಿದೆ. ಹಿಂದೆ, ಇದೇ ಸರ್ಕಾರದ ಸಚಿವ ನಾಗೇಂದ್ರ ಅವರೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಒಂದು ಕ್ಷಣವೂ ತಡ ಮಾಡದೇ, ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಯಾರನ್ನೋ ಉಳಿಸುವ, ರಕ್ಷಿಸುವ ದುಸ್ಸಾಹಸ ಬೇಡ ಎಂದು ಎಚ್ಚರಿಸಿದರು.

ಮೇಧಾವಿ ಪ್ರಿಯಾಂಕ್ ಖರ್ಗೆಯವರಿಗೆ ಮರೆವು ಜಾಸ್ತಿ : ಮೇಧಾವಿ ಪ್ರಿಯಾಂಕ್ ಖರ್ಗೆಯವರಿಗೆ ಮರೆವು ಜಾಸ್ತಿ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದನ್ನು ಪ್ರಿಯಾಂಕ್ ಮರೆಯಬಾರದು. ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಜಾರ್ಜ್ ಅವರು ಕೂಡ ರಾಜೀನಾಮೆ ಕೊಟ್ಟು, ಸಿಬಿಐ ತನಿಖೆ ಆಗಿ ಕ್ಲೀನ್ ಚಿಟ್ ಬಂದಿತ್ತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿ.ವೈ. ವಿಜಯೇಂದ್ರ (ETV Bharat)

ಸಚಿನ್ ಕುಟುಂಬಕ್ಕೆ ಭದ್ರತೆ : ಸಚಿನ್ ಅವರ ಕುಟುಂಬಕ್ಕೆ ತಕ್ಷಣದಿಂದ ಭದ್ರತೆ ಕೊಡಬೇಕು. ಕುಟುಂಬಕ್ಕೆ 1 ಕೋಟಿ ರೂ‌.ಗಳ ಪರಿಹಾರ ನೀಡಬೇಕು. ಹಲವರು ವಿದ್ಯಾವಂತರಿದ್ದು, ಕುಟುಂಬದ ಒಬ್ಬರು ಸದಸ್ಯರಿಗೆ ಸರಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.

ಹಿಂದೂ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲಬುರ್ಗಿಯ ಬಿಜೆಪಿ ನಾಯಕರಾದ ಚಂದುಪಾಟೀಲ, ಮಣಿಕಂಠ ರಾಠೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ಧಲಿಂಗ ಸ್ವಾಮೀಜಿ ಅವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್​ಗಳನ್ನು ಬಳಸುವ ವಿಚಾರವೂ ಡೆತ್ ನೋಟಿನಲ್ಲಿದೆ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದರ ಸಿಬಿಐ ತನಿಖೆ ಅತ್ಯಗತ್ಯ ಎಂದರು.

ರಾಜ್ಯದ ಪೊಲೀಸ್ ಇಲಾಖೆಯಿಂದ ಅಂಥ ಶಕ್ತಿಶಾಲಿ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರಿಯಾಂಕ್ ಖರ್ಗೆ ಸರ್ವ ಇಲಾಖೆಯ ಸಚಿವರು : ಪ್ರಿಯಾಂಕ್ ಖರ್ಗೆಯವರ ಇಲಾಖೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ, ಬಿಟಿ ಮಾತ್ರವಲ್ಲ; ಅವರು ಸರ್ವ ಇಲಾಖೆಯ ಸಚಿವರು. ಸದನದಲ್ಲಿ ಗೃಹ ಸಚಿವರಿದ್ದರೂ, ಸಿಎಂ ಕುರಿತು ಪ್ರಶ್ನೆ ಇದ್ದರೂ ಅವರ ಪರವಾಗಿ ಇವರು ಎದ್ದೇಳುತ್ತಾರೆ; ಗಲಾಟೆ ಮಾಡುತ್ತಾರೆ ಎಂದು ವಿಜಯೇಂದ್ರ ಟೀಕಿಸಿದರು.

ಪ್ರಿಯಾಂಕ್ ಖರ್ಗೆ ಅವರು ಬಹಳ ಜ್ಞಾನಿ, ಮೇಧಾವಿ, ಬುದ್ಧಿವಂತರು, ಅಷ್ಟೇ ಪ್ರಭಾವಿ, ಶಕ್ತಿಶಾಲಿ ಮುಖಂಡ ಎಂದು ತಿಳಿಸಿದರು. ಯಡಿಯೂರಪ್ಪ ಅವರ ಪೋಸ್ಕೊ ಕೇಸ್​​ ಮುಚ್ಚಿಹಾಕಲು ಎಂಬ ಮಾತನ್ನು ಪ್ರಿಯಾಂಕ್ ಖರ್ಗೆಯವರು ಹೇಳಿದ್ದು, ಅವರು ಸುಪ್ರೀಂ ಕೋರ್ಟಾ, ಹೈಕೋರ್ಟಾ​​ ಎಂದು ಪ್ರಶ್ನಿಸಿದರು.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರು ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು (ETV Bharat)

ನಿನ್ನೆ ನಾನು, ವಿಪಕ್ಷ ನಾಯಕರು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಭಾಲ್ಕಿ ತಾಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‍ಗೆ 5 ಜನರು ಸಹೋದರಿಯರಿದ್ದಾರೆ ಎಂದು ವಿವರಿಸಿದರು. ಬಿಜೆಪಿಯವರಿಗೆ ರಾಜಕೀಯ ತೆವಲು, ಚಟ, ಹಿಟ್ ಅಂಡ್​​ ರನ್ ಎಂದು ಕಾಂಗ್ರೆಸ್ಸಿನವರು ಮಾತನಾಡುತ್ತಾರೆ ಎಂದರು.

ಸಚಿನ್ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಹಾಕಿಕೊಂಡಿದ್ದಾಗ ಅವರ ಇಬ್ಬರು ಸಹೋದರಿಯರು ಮಧ್ಯಾಹ್ನವೇ 2.15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿದ್ದರು. ಗೋಗರೆದು ಕೇಳಿದರೂ ಅವರ ಮನವಿಯನ್ನು ಕಿಂಚಿತ್ತೂ ಲೆಕ್ಕಿಸದೇ, ಅಮಾನವೀಯವಾಗಿ ಪಿಎಸ್‍ಐ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಅವರನ್ನು ಪೊಲೀಸ್ ಸ್ಟೇಷನ್‍ಗಳಿಗೆ ತಿರುಗಾಡಿಸಿದ್ದರು ಎಂದು ಟೀಕಿಸಿದರು.

ದೂರು ಸ್ವೀಕರಿಸಿಲ್ಲ :ಸಚಿನ್ ಹುಡುಕುವ ಕೆಲಸವನ್ನೂ ಮಾಡಿಲ್ಲ. ಪೊಲೀಸ್ ಅಧಿಕಾರಿಗಳ ವರ್ತನೆ ಖಂಡನೀಯ. ಕಾಂಗ್ರೆಸ್ ಹಿರಿಯ ಮುಖಂಡ, ಖರ್ಗೆ ಕುಟುಂಬಕ್ಕೆ ಹತ್ತಿರ ಇರುವ ರಾಜು ಕಪನೂರ್ ಈ ಪ್ರಕರಣದ ಹಿಂದಿನ ಪ್ರಮುಖ ಆರೋಪಿ ಎಂಬುದು ಡೆತ್ ನೋಟಿನಲ್ಲಿದೆ ಎಂದು ತಿಳಿಸಿದರು.

ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಬಡ ಕುಟುಂಬಕ್ಕೆ ಅನ್ಯಾಯವಾಗಿದೆ. ಕುಟುಂಬದ ಆಧಾರಸ್ತಂಭ ಕುಸಿದಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ನಾವು ಒತ್ತಾಯಿಸುತ್ತಿದ್ದೇವೆ. ದೆಹಲಿಯಲ್ಲಿ ಪ್ರಮುಖ ಸಭೆ ಇದ್ದರೂ ಇಲ್ಲಿ ಬಂದಿದ್ದೇನೆ. ಭಾಲ್ಕಿಗೆ ಹೋಗಿ ಬಂದಿದ್ದೇವೆ ಎಂದ ಅವರು, ರಾಜು ಕಪನೂರ್, ಖರ್ಗೆ ಕುಟುಂಬಕ್ಕೆ ಪರಮಾಪ್ತ. ಬಡ ಸಚಿನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಇಚ್ಛೆ ನಮ್ಮದು ಎಂದರು.

ಆತ್ಮಹತ್ಯೆ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರ :ರಾಜ್ಯದ ಕಾಂಗ್ರೆಸ್ ಸರ್ಕಾರ ಆಡಳಿತಾವಧಿಯಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ರಾಜ್ಯ ಸರ್ಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಸರ್ಕಾರ, ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಹಿಂದೆಂದೂ ಇಂಥ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಕೇಳಿರಲಿಲ್ಲ, ನೋಡಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಸರ್ಕಾರವು ಆತ್ಮಹತ್ಯೆ ಭಾಗ್ಯವನ್ನು ಕರ್ನಾಟಕ ರಾಜ್ಯಕ್ಕೆ ದಯಪಾಲಿಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ಬಯಲಾದುದರಿಂದ ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಮೊದಲ ಆತ್ಮಹತ್ಯೆ ಮಾಡಿಕೊಂಡಿದ್ದು, ಬಿಜೆಪಿ ಹೋರಾಟದಿಂದ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದರು. ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಪಿ.ಎ. ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಗುತ್ತಿಗೆದಾರರೊಬ್ಬರು ಬಾಕಿ ಹಣ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿಯಲ್ಲಿ ಕ್ರಷರ್ ಲಾರಿ ಮಾಲೀಕರೊಬ್ಬರು ಲಂಚ ಕೊಡಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿ ಪಿಎಸ್‍ಐ ಪರಶುರಾಮ, ಸ್ಥಳೀಯ ಶಾಸಕರ ಪುತ್ರನ ಒತ್ತಡ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (ETV Bharat)

ಟೆಂಡರ್ ಮಾಡಿಕೊಡಲು ಶೇ. 5 ದುಡ್ಡಿನ ಬೇಡಿಕೆ ಇಟ್ಟಿರುತ್ತಾನೆ. ಪ್ರಿಯಾಂಕ್ ಖರ್ಗೆ ನಾನು ಹೇಳಿದ ಮಾತನ್ನು ಮೀರುವುದಿಲ್ಲ; ಮಾನ್ಯ ಸಚಿವರ ಬೆಂಬಲ ಇದೆ ಎಂದು ರಾಜು ಕಪನೂರ್ ಹೇಳಿದ್ದಾಗಿ ಸಚಿನ್ ತನ್ನ ಡೆತ್ ನೋಟಿನಲ್ಲಿ ತಿಳಿಸಿದ್ದಾಗಿ ಮಾಹಿತಿ ಕೊಟ್ಟರು. ಪೊಲೀಸ್ ಠಾಣೆಗೆ ಹೋಗಿದ್ದ ಹೆಣ್ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಳ್ಳಲಾಯಿತು. ಅವರ ಮನವಿಗೆ ಸ್ಪಂದಿಸಲಿಲ್ಲ; ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು. ದೂರು ದಾಖಲಿಸಿ, ಮೊಬೈಲ್ ಟ್ರ್ಯಾಕ್ ಮಾಡಿದ್ದರೆ ನನ್ನ ತಮ್ಮ ಉಳಿಯುತ್ತಿದ್ದ ಎಂದು ಆ ಸೋದರಿಯರು ತಿಳಿಸಿದ್ದಾರೆ ಎಂದು ವಿವರಿಸಿದರು.

ಹೆಣ್ಮಕ್ಕಳಿಗೆ ಹೀಯಾಳಿಸಿ, ಅಪಮಾನ ಮಾಡಿ ನಿಂದಿಸಿದ್ದು ಅಕ್ಷಮ್ಯ ಅಪರಾಧ. ಇವರ ಕಾಲಹಣದಿಂದ ಹೀಗಾಗಿದೆ. ಅಲ್ಲಿನ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿ ಥರ ಇವತ್ತು ದುರುಪಯೋಗ ಆಗುತ್ತಿವೆ. ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ಕಲಬುರಗಿ ಜಿಲ್ಲೆ ಯಾರ ಕಪಿಮುಷ್ಟಿಯಲ್ಲಿದೆ ಎಂದು ಬಸ್ ನಿಲ್ದಾಣದಲ್ಲಿ ಯಾರಿಗೆ ಕೇಳಿದರೂ ಹೇಳುತ್ತಾರೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದಿವೆ. ಅವನ್ನು ಮುಚ್ಚಿ ಹಾಕಿದ ಷಡ್ಯಂತ್ರ ಹಿಂದೆ ಆಗಿದೆ. ಕಾಂಗ್ರೆಸ್ಸಿನವರು ಹಗಲು ಅಂಥ ಕುಟುಂಬದವರನ್ನು ಭೇಟಿ ಮಾಡಿಲ್ಲ; ಬೆಳಗಿನ ಜಾವ 3 ಗಂಟೆಗೆ ಭೇಟಿ ಕೊಟ್ಟಿದ್ದಾರೆ. ಕುಟುಂಬಕ್ಕೆ ಸಮಾಧಾನ ಹೇಳಿ, ಸಮಾಧಾನಿತರಾಗದೇ ಇದ್ದರೆ ಬೆದರಿಕೆ ಹಾಕುತ್ತಾರೆ ಎಂದು ಆಕ್ಷೇಪಿಸಿದರು. ಕಲಬುರಗಿ ಪೊಲೀಸ್ ಇಲಾಖೆ ಖರ್ಗೆ ಮತ್ತು ಕುಟುಂಬದ ಮುಷ್ಟಿಯೊಳಗಿದೆ ಎಂದು ಆರೋಪಿಸಿದರು.

ಸಚಿವರ ನಿವಾಸಕ್ಕೆ ಮುತ್ತಿಗೆ :ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡದೇ ಇದ್ದರೆ ಜ. 4 ರಂದು ಕಲಬುರಗಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ. ಸಿಎಂ ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಆದೇಶಿಸಿದರೆ ಒಳ್ಳೆಯದು. ಜನವರಿ 3 ರವರೆಗೂ ಕಾಯುತ್ತೇವೆ. ಸಿಬಿಐಗೆ ನೀಡದೇ ಇದ್ದರೆ ಜ.4 ರಂದು ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಸಚಿವ ಪ್ರಿಯಾಂಕ್‌ ಖರ್ಗೆ ಮೇಲಿನ ಆರೋಪ ಪ್ರಕರಣ ಸಿಐಡಿಗೆ ವಹಿಸಲಾಗಿದೆ: ಗೃಹ ಸಚಿವ ಪರಮೇಶ್ವರ್ - SACHINS SUICIDE CASE

ABOUT THE AUTHOR

...view details