ಮೈಸೂರು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಒಂದೆಡೆ ಮರಗಳು ಧರೆಗುರುಳಿದ್ದರೆ, ಚಾಮುಂಡಿ ಬೆಟ್ಟದಲ್ಲಿ ಬಂಡೆ ಉರುಳಿ ರಸ್ತೆಗೆ ಬಿದ್ದಿದೆ. ಫೆಂಗಲ್ ಚಂಡಮಾರುತದ ಪರಿಣಾಮ ಕಟಾವು ಮಾಡಿ ಗದ್ದೆಯಲ್ಲಿಟ್ಟಿದ್ದ ಭತ್ತ ಜಲಾವೃತಗೊಂಡು ರೈತರಿಗೆ ನಷ್ಟ ಉಂಟಾಗಿದೆ.
ಸರಸ್ವತಿಪುರಂನಲ್ಲಿ ಸೋಮವಾರ ಸಂಜೆ ರಸ್ತೆ ಬದಿಯ ಎರಡು ಮರಗಳು, ನಿಂತಿದ್ದ ಕಾರಿನ ಮೇಲೆ ಬಿದ್ದು ಕಾರು ಜಖಂ ಆಗಿರುವ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೈಸೂರಿನಲ್ಲಿ ನಿರಂತರ ಮಳೆ: ನಿಂತಿದ್ದ ಕಾರಿನ ಮೇಲೆ ಬಿದ್ದ ಮರ, ರಸ್ತೆಗುರುಳಿದ ಬಂಡೆಗಳು (ETV Bharat) ನಿರಂತರ ಮಳೆಗೆ ಚಾಮುಂಡಿ ಬೆಟ್ಟಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಮಣ್ಣು ಸಡಿಲಗೊಂಡು ಬೆಟ್ಟದ ಮೇಲಿನ ಬಂಡೆಗಳು ಕುಸಿದು ರಸ್ತೆಗೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಫೆಂಗಲ್ ಚಂಡಮಾರುತದಿಂದ ಮೈಸೂರಿನಲ್ಲಿ ಮಳೆ: ಹಾಳಾದ ಬೆಳೆ (ETV Bharat) ಹುಣಸೂರು ತಾಲೂಕಿನ ಕಾಳೆನಹಳ್ಳಿಯಲ್ಲಿ ಕಟಾವು ಮಾಡಿಟ್ಟಿದ್ದ ಭತ್ತ ಜಲಾವೃತವಾಗಿವೆ. ಜಮೀನುಗಳು ಜಲಾವೃತಗೊಂಡು ಕಟಾವಿಗೆ ಬಂದ ಭತ್ತ, ಇತರ ಬೆಳೆಗಳ ಕಟಾವಿಗೆ ಕಷ್ಟವಾಗಿದೆ. ಕೈಗೆ ಬಂದು ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ರೈತರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಇದನ್ನೂ ಓದಿ:ಮಂಗಳೂರಲ್ಲಿ ಕೇಂದ್ರೀಕೃತವಾದ ಫೆಂಗಲ್ ಚಂಡಮಾರುತ: ಸಂಜೆವರೆಗೆ ಭಾರಿ ಮಳೆ