ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಶಾಲಾ ಅವಧಿಯಲ್ಲಿ ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡದಿಂದ ಸಿಮೆಂಟ್ ಇಟ್ಟಿಗೆಗಳು ಶಾಲಾ ಕೊಠಡಿಯ ಮೇಲೆ ಬಿದ್ದ ಪರಿಣಾಮ, ಕೊಠಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮೇಲ್ನೋಟಕ್ಕೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರ ನಗರ ಕುಂಬಾರಪೇಟೆಯಲ್ಲಿರುವ ಮೌಂಟ್ ಹಿರಾ ಖಾಸಗಿ ಪ್ರೌಢ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, 10ನೇ ತರಗತಿಯ ಬಾನು, ರುಖಿಯಾ, ಹಫೀಸ್ ಉನ್ನಿಸಾ ಎಂಬ 16 ವರ್ಷದ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಶಾಲಾ ಅವಧಿಯಲ್ಲಿ ಕಟ್ಟಡ ಕಾಮಾಗಾರಿ: ಇಟ್ಟಿಗೆ ಬಿದ್ದು ಮೂವರು ವಿದ್ಯಾರ್ಥಿಗಳಿಗೆ ಗಾಯ (ETV Bharat) ಶಾಲಾ ಕೊಠಡಿ ಪಕ್ಕದಲ್ಲಿಯೇ ಎರಡಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಾಗಿ ಮೊದಲ ಅಂತಸ್ತಿನಲ್ಲಿ ಸಿಮೆಂಟ್ ಇಟ್ಟಿಗೆಗಳನ್ನು ಇಡಲಾಗಿತ್ತು. ಈ ಇಟ್ಟಿಗೆಗಳು ಶಾಲಾ ಕೊಠಡಿಯ ಮೇಲೆ ಬಿದ್ದಿವೆ. ಸಿಮೆಂಟ್ ಶೀಟ್ಗಳನ್ನು ಒಡೆದು ಒಳಗೆ ಬಂದಿರುವ ಇಟ್ಟಿಗೆಗಳು ವಿದ್ಯಾರ್ಥಿನಿಯರ ಮೇಲೆ ಬಿದ್ದಿವೆ. ಮೂವರು ವಿದ್ಯಾರ್ಥಿನಿಯರ ತಲೆಭಾಗಕ್ಕೆ ಪೆಟ್ಟಾಗಿದೆ.
ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕ ಹನುಮ ನಾಯಕ್, "ಶಾಲಾ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಶಾಲಾ ಅವಧಿಯಲ್ಲಿ ಕಟ್ಟಡ ಕಾಮಗಾರಿ ಮಾಡುವಂತಿಲ್ಲ. ಒಂದು ವೇಳೆ ಶಾಲಾ ಅವಧಿಯಲ್ಲಿ ಕಟ್ಟಡ ಕಾಮಗಾರಿ ಮಾಡಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದು. ಮೇಲ್ನೋಟಕ್ಕೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡುಬಂದಿದ್ದು, ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದ್ದಾರೆ. ಅವರು ನೀಡುವ ವರದಿಯ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
ಇದನ್ನೂ ಓದಿ:ದೆಹಲಿಯ ಸಿಆರ್ಪಿಎಫ್ ಶಾಲೆಯ ಬಳಿ ಭಾರಿ ಸ್ಫೋಟ: ಜೀವಹಾನಿ ಇಲ್ಲ, ಪೊಲೀಸರಿಂದ ತೀವ್ರ ತನಿಖೆ