ಬೆಂಗಳೂರು:ಯಶವಂತಪುರ ಹೋಬಳಿಯ ಚೌಡೇಶ್ವರಿನಗರದ ಲಗ್ಗೆರೆ 50 ಅಡಿ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಾ.4ರಂದು ನಡೆಸಲು ಉದ್ದೇಶಿಸಿರುವ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ವಿಚಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬಿಬಿಎಂಪಿ ಮತ್ತು ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೋವಿಡ್ ಲಾಕ್‌ಡೌನ್ ನಿರ್ಬಂಧ ದಿನಗಳಲ್ಲಿ ಲಗ್ಗೆರೆ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆ ಎಂದು ಆರೋಪಿಸಿ ಡಿ.ದಾಕ್ಷಾಯಣಿ ಎಂಬವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ದೇವರ ವಿಗ್ರಹ ಪ್ರತಿಷ್ಠಾನ ಕಾರ್ಯಕ್ರಮದ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಬಿಬಿಎಂಪಿ ವಾರ್ಡ್ ನಂ-73ರ ಹಾಲಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಮೃತ್ಯುಂಜಯ ಅವರು ಖಾತರಿಪಡಿಸಬೇಕು. ಈ ವಿಚಾರದಲ್ಲಿ ಅಗತ್ಯವಿದ್ದರೆ ಆರ್‌ಎಂಸಿ ಯಾರ್ಡ್ ಸಹಾಯಕ ಪೊಲೀಸ್ ಆಯುಕ್ತ ಹಾಗೂ ರಾಜಗೋಪಾಲ ನಗರ ಠಾಣೆ ಇನ್ಸ್‌ಪೆಕ್ಟರ್ ನೆರವು ಪಡೆಯಬಹುದು ಎಂದು ಪೀಠ ತಿಳಿಸಿದೆ.
ಸಂಬಂಧಪಟ್ಟ ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕರು, ದೇವಸ್ಥಾನ ನಿರ್ಮಾಣವಾಗಿದೆ ಎನ್ನಲಾದ ಲಗ್ಗೆರೆ 50 ಅಡಿ ಮುಖ್ಯರಸ್ತೆಯ ಪಾದಚಾರಿ ಮಾರ್ಗದ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ರಾಜಗೋಪಾಲ ನಗರ ಠಾಣೆಯ ಇನ್ಸ್‌ಪೆಕ್ಟರ್ ಈ ಆದೇಶದ ಪ್ರತಿಯನ್ನು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಗೆ ತಲುಪಿಸಿ, ಆ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿಸಬೇಕು. ಪ್ರಕರಣದಲ್ಲಿ ವಾದಾಂಶ ಮಂಡನೆಯ ನಂತರ ಈ ಆದೇಶ ತೆರವುಗೊಳಿಸಲು ಕೋರಲು ದುರ್ಗಾಪರಮೇಶ್ವರಿ ಸೇವಾ ಸಮಿತಿ ಸ್ವತಂತ್ರವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ನಿರ್ದೇಶಿಸಿದೆ.
ವಿವಾದಿತ ಜಾಗದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು 2023ರ ಡಿ.21ರಂದು ಮತ್ತು 2024ರ ಫೆ.20ರಂದು ಹೊರಡಿಸಿದ್ದ ಆದೇಶ ಪಾಲಿಸದ ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರ ಕ್ರಮದ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ನ್ಯಾಯಪೀಠ, ನ್ಯಾಯಾಲಯದ ಆದೇಶದಂತೆ ವಿವಾದಿತ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಸದೇ ಇರುವುದಕ್ಕೆ ಕಾರಣ ತಿಳಿಸಿಲ್ಲ. ಇದು ನ್ಯಾಯಾಲಯದ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದನ್ನು ತೋರಿಸುತ್ತದೆ. ಮತ್ತೊಂದೆಡೆ ರಾಜಗೋಪಾಲ ನಗರ ಠಾಣಾ ಪೊಲೀಸರು ಕೋರ್ಟ್‌ನ ಈ ಆದೇಶ ಪ್ರತಿಯನ್ನು ದುರ್ಗಾಪರಮೇಶ್ವರಿ ಸೇವಾ ಸಮಿತಿಗೆ ತಲುಪಿಸಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಕೊರೋನಾ ಲಾಕ್‌ಡೌನ್ ದಿನಗಳಲ್ಲಿ ಲಗ್ಗೆರೆ 50 ಅಡಿ ಮುಖ್ಯರಸ್ತೆಯ ಪಾದಚಾರಿಮಾರ್ಗವನ್ನು ಒತ್ತುವರಿ ಮಾಡಿ ದುರ್ಗಾಪರಮೇಶ್ವರಿ ಸೇವಾ ಸಮಿತಿಯು ದುರ್ಗಾಪರಮೇಶ್ವರಿ ದೇವಸ್ಥಾನ ನಿರ್ಮಿಸಿದೆ. ಹಾಗಾಗಿ, ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ಸೂಚಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಜೊತೆಗೆ, ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ದೇವಾಲಯದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಮಾ.4ರಂದು ನಿಗದಿಯಾಗಿದೆ. ಒಂದೊಮ್ಮೆ ದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಿದರೆ, ಒತ್ತುವರಿ ತೆರವುಗೊಳಿಸಲು ಕಷ್ಟಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅದನ್ನು ಪರಿಗಣಿಸಿದ ಕೋರ್ಟ್ ಈ ಆದೇಶ ಮಾಡಿ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.
ಇದನ್ನೂ ಓದಿ:ಸರ್ಕಾರಗಳ ಅಧಿಕೃತ ಲಾಂಛನ, ಚಿಹ್ನೆ ದುರ್ಬಳಕೆ ತಡೆ ಕೋರಿ ಅರ್ಜಿ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್