ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಅಹಿಂದ ಸಂಘಟನೆಗಳು ಬೀದಿಗಿಳಿದಿದ್ದಾರೆ. ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಭಾಗಗಳಲ್ಲಿ ದಿಢೀರ್ ಪ್ರತಿಭಟನೆಗೆ ಮುಂದಾಗಿವೆ.
ದೇಶದ ರಾಜಕೀಯ ಇತಿಹಾಸದಲ್ಲೇ ರಾಜ್ಯಪಾಲರು ಪ್ರಾಮಾಣಿಕ ಮುಖ್ಯಮಂತ್ರಿ ಹಾಗೂ ನಿರಪರಾಧಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುತಂತ್ರಕ್ಕೆ ತಲೆಬಾಗಿ ಅನುಮತಿ ನೀಡಿರುವುದು ಅತ್ಯಂತ ದುರದೃಷ್ಟಕರ. ಅವರ ಹೆಸರಿಗೆ ಕಳಂಕ ತರಲು ಸಿದ್ದರಾಮಯ್ಯನವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ರಾಜಭವನ ದುರ್ಬಳಕೆ ಮಾಡಿಕೊಂಡಿದೆ ಎಂದರು.
ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ ಕಾಂಗ್ರೆಸ್, ಯಾವುದೇ ಪ್ರಕರಣದಲ್ಲೂ ಹಾಗೂ ಹಗರಣದಲ್ಲಿ ಇಲ್ಲಿಯವರೆಗೂ ಭಾಗಿಯಾಗದೇ ಪ್ರಾಮಾಣಿಕವಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯನವರನ್ನು ಕಳಂಕಿತರನ್ನಾಗಿ ಮಾಡಲು ಕೇಂದ್ರ ಸರ್ಕಾರ ಬಿಜೆಪಿ ಪಕ್ಷ ನಡೆಸಿರುವ ಕುತಂತ್ರ ರಾಜ್ಯಪಾಲರ ಮೂಲಕ ಇಂದು ಬಹಿರಂಗವಾಗಿದೆ. ರಾಜ್ಯಪಾಲರು ಬಿಜೆಪಿಯ ಅನೇಕ ಹಿಂದಿನ ಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ. ಉದ್ದೇಶ ಪೂರ್ವಕವಾಗಿ ಬಿಜೆಪಿ ಜನತಾದಳದ ನಾಯಕರ ಒತ್ತಾಯದ ಮೇರೆಗೆ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಒಂದು ಅಂಶದ ಕಾರ್ಯಕ್ರಮವನ್ನು ರಾಜ್ಯಪಾಲರು ಹಮ್ಮಿಕೊಂಡಿರುವುದು ಇಂದು ಜಗಜ್ಜಾಹಿರವಾಗಿದೆ ಎಂದು ದೂರಿದರು.
ಬೆಂಗಳೂರಿನ ರಾಜಭವನದ ಎದುರು ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿದರೆ, ಅಹಿಂದ ಸಂಘಟನೆಗಳ ಮುಖಂಡರು, ಮೈಸೂರಿನ ನ್ಯಾಯಾಲಯದ ಮುಂಭಾಗ ಇರುವ ಮಹಾತ್ಮ ಗಾಂಧಿ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಗೋ ಬ್ಯಾಕ್ ಗೋ ಬ್ಯಾಕ್ ಎಂದು ರಾಜ್ಯಪಾಲರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಶರ್ಟ್ ಬಿಚ್ಚಿ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು. ವೇಳೆ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನಿಸಿದವರನ್ನು ಮಾರ್ಗಮಧ್ಯೆ ಪೊಲೀಸರು ತಡೆದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಹಿನ್ನೆಲೆ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕೈ ಮುಖಂಡರು, ರಾಜ್ಯಪಾಲರು ಹಾಗೂ ಬಿಜೆಪಿ ಘೋಷಣೆ ಕೂಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟೈರ್ಗೆ ಬೆಂಕಿ ಹಾಕಿ ಅಸಮಾಧಾನ ಹೊರಹಾಕಿದರು.
ದಾವಣಗೆರೆಯಲ್ಲೂ ಪ್ರತಿಭಟನೆ:ಸಿಎಂ ವಿರುದ್ಧ ರಾಜ್ಯಪಾಲರ ನಡೆ ಖಂಡಿಸಿ ದಾವಣಗೆರೆಯಲ್ಲಿಯೂ ಅಹಿಂದ ಒಕ್ಕೂಟ ಪ್ರತಿಭಟನೆ ನಡೆಸಿತು. ಕರ್ನಾಟಕ ಶೋಷಿತ ಹಿಂದುಳಿದ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ವಿವಿಧ ಸಮಾಜದ ನೂರಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.