ಬೆಂಗಳೂರು: ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ತಳ್ಳಿಹಾಕಿದ್ದು, ಇದು ನನ್ನ ವಿರುದ್ಧದ ಷಡ್ಯಂತ್ರ ಎಂದು ಹೇಳಿದ್ದಾರೆ. "ನಾನು ಆ ಮಹಿಳೆಯನ್ನು ಟಚ್ ಮಾಡಿದ್ರೆ ನನ್ನ ತಾಯಿಯನ್ನು ಟಚ್ ಮಾಡಿದ ಹಾಗೆಯೇ. ಕೇವಲ ಎರಡು ಮೂರು ಸಲ ನಡೆದ ವಿಡಿಯೋ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ. ಕೆಲವು ಮಂದಿ ಹಿಂದಿನಿಂದ ಈ ರೀತಿ ಕೆಲಸ ಮಾಡಿಸ್ತಿದ್ದಾರೆ. ನನ್ನ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸಾಕ್ಷಿಗಳ ಮೇಲೆ ಪರಿಣಾಮ ಬೀರಲು ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ" ಎಂದರು.
ಕಾವೇರಿ ನಿವಾಸದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿನಯ್ ಕುಲಕರ್ಣಿ, "ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗುತ್ತದೆ. ಇದರಲ್ಲಿ ನನ್ನದೇನೂ ಇಲ್ಲ. ಹಿಂದೆಯಿಂದ ಆರೋಪ ಮಾಡಿಸಿದ್ದಾರೆ. ನಾನೂ ಕೂಡ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ. ಸತ್ಯಾಸತ್ಯತೆ ಹೊರಬರಲಿ" ಎಂದು ಹೇಳಿದರು.
ಶಾಸಕ ವಿನಯ್ ಕುಲಕರ್ಣಿ (ETV Bharat) "ಆರೋಪದ ಮಾಡಿದ ಮಹಿಳೆ ರೈತ ಸಂಘದ ಮುಖಂಡೆ. ರೈತರನ್ನು ಕರೆದುಕೊಂಡು ಸಮಸ್ಯೆ ಹೇಳಿಕೊಂಡು ಬರುತ್ತಿದ್ದರು. ರೈತರಿಗೆ ನಾನು ಸಹಾಯ ಮಾಡಿದ್ದೆ. ಇದು ಮುಂದುವರಿದು ನನಗೆ ವಿಡಿಯೋ ಕಾಲ್ ಮಾಡುತ್ತಿದ್ರು. ಬಳಿಕ ವಾಟ್ಸ್ಆ್ಯಪ್ನಲ್ಲಿ ರೀಲ್ಸ್ ಕಳಿಸುತ್ತಿದ್ದರು. ನಮ್ಮ ಮಧ್ಯೆ 3.5 ವರ್ಷದಿಂದ ಯಾವುದೇ ಕಾಲ್, ಮೆಸೇಜ್ ನಡೆದಿಲ್ಲ. 3.5 ವರ್ಷದ ಹಿಂದಿನ ವಿಡಿಯೋ ಕಾಲ್ ಇಟ್ಟುಕೊಂಡು ಈಗ ಆರೋಪ ಮಾಡುತ್ತಿರುವುದು ಅಚ್ಚರಿಯಾಗುತ್ತಿದೆ. ಅಂಥದ್ದು ಏನಾದ್ರೂ ಇದ್ರೆ ನಾನೇ ಒಪ್ಪಿಕೊಳ್ತಿದ್ದೆ" ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದರು.
ಜಾತಿ ಗಣತಿಗೆ ನನ್ನ ವಿರೋಧ ಇಲ್ಲ:"ಜಾತಿ ಗಣತಿಗೆ ನನ್ನ ವಿರೋಧ ಇಲ್ಲ. ಆದ್ರೆ ಇನ್ನೊಂದು ಸಲ ಪರಿಶೀಲಿಸಿ ಎಂದು ಹೇಳುತ್ತೇನೆ. ಹಲವಾರು ಪಂಗಡಗಳು ಲಿಂಗಾಯತ ಸಮಾಜದಲ್ಲಿವೆ. ಇದ್ರಿಂದ ಪೆಟ್ಟುಬೀಳುವ ಸಾಧ್ಯತೆ ಇದೆ. ಹೀಗಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದಿದ್ದೇನೆ" ಎಂದು ವಿನಯ್ ಕುಲಕರ್ಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮುಡಾ ಪ್ರಕರಣ ಹರಿಯಾಣ ಚುನಾವಣೆ ಮೇಲೆ ಎಫೆಕ್ಟ್ ಆಗಿದೆ: ಕಾಂಗ್ರೆಸ್ ಹಿರಿಯ ಮುಖಂಡ ಕೋಳಿವಾಡ