ಕರ್ನಾಟಕ

karnataka

ETV Bharat / state

ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿಗೆ​ ಜಾಮೀನು ನೀಡಿದ ಬೆಂಗಳೂರು ಕೋರ್ಟ್​​​​ - Bail To Rahul Gandhi - BAIL TO RAHUL GANDHI

ಮಾನ ಹಾನಿಕರ ಜಾಹೀರಾತು ಆರೋಪದಡಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಬೆಂಗಳೂರು ನ್ಯಾಯಾಲಯವು ಜಾಮೀನು ನೀಡಿದೆ.

rahul gandhi
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ (Photo: ETV Bharat)

By ETV Bharat Karnataka Team

Published : Jun 7, 2024, 11:17 AM IST

ನ್ಯಾಯಾಲಯಕ್ಕೆ ಹಾಜರಾದ ರಾಹುಲ್​ ಗಾಂಧಿ (ETV Bharat)

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾನ ಹಾನಿಕರ ಜಾಹೀರಾತು ನೀಡಿದ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು.

ಪ್ರಕರಣ‌ಕ್ಕೆ ಸಂಬಂಧಿಸಿದಂತೆ ನಗರದ ಜನಪ್ರತಿನಿಧಿಗಳ ವಿಶೇಷ (42ನೇ ಮ್ಯಾಜಿಸ್ಟ್ರೇಟ್) ನ್ಯಾಯಲಯದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು. ಕಳೆದ ವಿಚಾರಣೆ ವೇಳೆ ಖುದ್ದು ಹಾಜರಿಯಿಂದ ರಾಹುಲ್​ ವಿನಾಯ್ತಿ ಪಡೆದುಕೊಂಡಿದ್ದು, ಜೂನ್ 7ರಂದು ಹಾಜರಾಗುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಜಾಮೀನು ಪಡೆದರು.

ಪ್ರಕರಣದ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್ ಗಾಂದಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರಿಗೆ ನಮಸ್ಕರಿಸಿದರು. ಈ ವೇಳೆ ರಾಹುಲ್ ಗಾಂಧಿ ಪರ ವಕೀಲರಿಂದ ನಿಶಾನ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು 75 ಲಕ್ಷ ರೂ. ಮೌಲ್ಯದ ಆಸ್ತಿಯ ಶ್ಯೂರಿಟಿ ನೀಡಿದರು.

ವಕೀಲರ ಮನವಿ ಪರಿಗಣಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ, ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದರು.

ಪ್ರಕರಣದ ಹಿನ್ನೆಲೆ:ಕಳೆದ ವಿಧಾನಸಭೆ ಚುನಾವಣೆ ವೇಳೆ 2023ರ ಮೇ 5ರಂದು ಎಲ್ಲ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ 'ಭ್ರಷ್ಟಾಚಾರ ದರ ಪಟ್ಟಿ' ಎಂಬ ಹೆಸರಿನ ಅಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿತ್ತು. ಅಲ್ಲದೇ, ಕೋವಿಡ್‌ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಕಮಿಷನ್‌ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಕಮಿಷನ್​ನ (ಬಿಜೆಪಿ) ಸರ್ಕಾರವು 1.5 ಲಕ್ಷ ಕೋಟಿ ರೂ.ಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ಆರೋಪ ಮಾಡಲಾಗಿತ್ತು. ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬದಲಾಗಿ, ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಿ, ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಬಿ.ಎಸ್‌. ಕೇಶವಪ್ರಸಾದ್‌ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್​ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರಿಗೆ ಸಮನ್ಸ್​ ನೀಡಿತ್ತು.

ಬಿಗಿ ಭದ್ರತೆ:ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೋರ್ಟ್​ಗೆ ಹಾಜರಾಗಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದರು. ರಾಹುಲ್ ಗಾಂಧಿ ಹಾಜರಾಗಲಿರುವ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಇದನ್ನೂ ಓದಿ: ಮಾನಹಾನಿ ಕೇಸ್​​​​​​​ ಸಂಬಂಧ ವಿಚಾರಣೆಗೆ ಹಾಜರಾಗಲು ಬೆಂಗಳೂರಿನತ್ತ ರಾಹುಲ್​ ಗಾಂಧಿ - Rahul Gandhi To Appear Before Court Today

ABOUT THE AUTHOR

...view details