ಹಾವೇರಿ:"ಕಾಂಗ್ರೆಸ್ ಒಂದು ರೀತಿಯಲ್ಲಿ ಪರಾವಲಂಬಿ ಪಕ್ಷ. ದೇಶದ ಬಹುತೇಕ ಕಡೆ ಕಾಂಗ್ರೆಸ್ ಸೋತಿದೆ. ಗೆದ್ದೇ ಬಿಟ್ಟಿದ್ದೇವೆ ಎಂದು ಜಿಲೇಬಿ ಹಂಚಿದ್ದ ಹರಿಯಾಣದಲ್ಲೂ ಸೋಲು ಅನುಭವಿಸಿದೆ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಶಿಗ್ಗಾಂವಿಯಲ್ಲಿಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಗ್ಯಾರಂಟಿಗಳು ಕೆಲಸ ಮಾಡುತ್ತಿಲ್ಲ. ಮಹಿಳೆಯರಿಗೆ ಬಸ್ ಉಚಿತ ಇದೆ. ಆದರೆ ಬಸ್ ಸಂಖ್ಯೆ ಕಡಿಮೆ ಮಾಡಿದ್ದಾರೆ. ರಾಜ್ಯದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ 28 ರೂಪಾಯಿಗೆ ಕೆ.ಜಿ ಅಕ್ಕಿ ಕೊಡುತ್ತೇವೆ ಅಂದರೂ ಖರೀದಿಗೆ ಬರುತ್ತಿಲ್ಲ. ಕಾರಣ ಸರ್ಕಾರದ ಬಳಿ ದುಡ್ಡಿಲ್ಲ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷದಂತೆ ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ ಪಕ್ಷದ ಅಧ್ಯಕ್ಷರಾಗಿದ್ದರೆ, ಅವರ ಪುತ್ರನನ್ನು ಈಗ ಅಧ್ಯಕ್ಷನನ್ನಾಗಿ ಮಾಡಿದರೆ ಅದು ಕುಟುಂಬ ರಾಜಕೀಯ. ಆದರೆ ನಮ್ಮದು ಕುಟುಂಬ ರಾಜಕೀಯ ಅಲ್ಲ" ಎಂದರು.