ಬೆಂಗಳೂರು:''ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ರಾಜ್ಯವನ್ನು ಮತಾಂಧರ ಯುದ್ದ ಭೂಮಿಯನ್ನಾಗಿ ಪರಿವರ್ತಿಸಿದೆ'' ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
''ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನೇಹಾ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತನ್ನದೇ ಪಕ್ಷದ ನಾಯಕನ ಮಗಳ ಹತ್ಯೆಗೆ ನ್ಯಾಯ ಒದಗಿಸಲು ಆಗಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಮತಾಂಧರು ಕಾರು ಹರಿಸಿದ್ದಾರೆ. ರಾಮ ನವಮಿ ದಿನದಂದು ರಾಮಭಕ್ತರ ಮೇಲೆ ಹಲ್ಲೆ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಉಡುಪಿಯಲ್ಲಿ ಹಾಸ್ಟೆಲ್ನಲ್ಲಿ ಹೆಣ್ಣುಮಗಳ ಚಿತ್ರೀಕರಣ ಪ್ರಕರಣ, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣಗಳಿಂದ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಮಂಡ್ಯದಲ್ಲಿ ಪೊಲೀಸರು ಒತ್ತಾಯಪೂರ್ವಕವಾಗಿ ಕೇಸರಿ ಧ್ವಜವನ್ನು ಕೆಳಗಿಳಿಸಿದ್ದಾರೆ. ವಿಧಾನಸೌಧದಲ್ಲಿ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಮಹಿಳೆಯರಿಗೆ ಭದ್ರತೆ, ನೀರಿಗೆ ಇಲ್ಲ ಗ್ಯಾರಂಟಿ. ಗಲಭೆಕೋರರಿಗೆ, ಉಗ್ರರಿಗೆ ರಕ್ಷಣೆ ಗ್ಯಾರಂಟಿ, ವಿದ್ಯುತ್ ದರ ಹೆಚ್ಚಳದ ಗ್ಯಾರಂಟಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಯನ್ನು ಪ್ರೋತ್ಸಾಹಿಸುತ್ತಿದೆ'' ಎಂದು ಕಿಡಿಕಾರಿದರು.