ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ETV Bharat) ತುಮಕೂರು:''ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಆತಂಕ ಶುರುವಾಗಿದೆ. ಹೇಗಾದರೂ ಮಾಡಿ ಈ ಬಾರಿಯಾದ್ರೂ ನಾರಾಯಣ ಸ್ವಾಮಿಯವರನ್ನು ಸೋಲಿಸಲೇಬೇಕೆಂದು ನಿರ್ಧರಿಸಿದ್ದಾರೆ. ಇದಕ್ಕಾಗಿ ನಾರಾಯಣಸ್ವಾಮಿ ಹೆಸರಿನ ನಾಲ್ವರನ್ನು ಕಣಕ್ಕಿಳಿಸಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ತುಮಕೂರಿನಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ''ಬಿಜೆಪಿಯನ್ನು ಕುತಂತ್ರದಿಂದ ಸೋಲಿಸಲು ಕಾಂಗ್ರೆಸ್ ಹವಣಿಸುತ್ತಿದೆ. ಆದರೆ, ಮತದಾರರಾದ ನೀವು ನಾರಾಯಣಸ್ವಾಮಿ ಅವರನ್ನು ಕೈ ಹಿಡಿಯುವ ವಿಶ್ವಾಸ ನನಗಿದೆ. ಅಧಿಕಾರ ಬಲದಿಂದ ಚುನಾವಣೆ ಗೆಲ್ಲಬಹುದೆಂದು ಅವರು ತಿಳಿದಿದ್ದು, ಅದು ಸಾಧ್ಯವಿಲ್ಲ'' ಎಂದರು.
''ಕಾಂಗ್ರೆಸ್ ಗೆಲ್ಲುವುದರಿಂದ ಸದನದ ಪಾವಿತ್ರಕ್ಕೆ ಧಕ್ಕೆ ಬರುವುದು ನಿಶ್ಚಿತ. ಜೆಡಿಎಸ್-ಬಿಜೆಪಿ ಸರ್ಕಾರವಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಏನು ಮಾಡಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಕೋವಿಡ್ ಬಂದಾಗ ಬಿಜೆಪಿ ಸರ್ಕಾರ ಶಿಕ್ಷಕರಿಗೆ ಸಂಬಳ ಕಟ್ ಮಾಡಿಲ್ಲ. ಇಡೀ ದೇಶದಲ್ಲಿ ಸಂಬಳ ಕಟ್ ಮಾಡಿದರೆ ಯಡಿಯೂರಪ್ಪ ಸರ್ಕಾರ ದಿಟ್ಟ ನಿಲುವು ತೆಗೆದುಕೊಂಡಿತ್ತು. ನಮ್ಮ ಸರ್ಕಾರ ಇದ್ದಾಗ ಅನೇಕ ಪ್ರೌಢ ಶಾಲೆಗಳು, ಪಾಲಿಟೆಕ್ನಿಕ್ ಶಾಲೆಗಳನ್ನು ತೆರೆಯಲಾಗಿದ್ದು, ಶಿಕ್ಷಣಕ್ಕೆ ಅತೀ ಹೆಚ್ಚು ಒತ್ತು ಕೊಟ್ಟಿದ್ದೇವೆ" ಎಂದು ತಿಳಿಸಿದರು.
"ನಮ್ಮ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದು ಯುವಕರಿಗೆ ಶಕ್ತಿ ನೀಡುವ ಕೆಲಸ ಮಾಡಿದರೆ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ. ದಾವಣಗೆರೆಯಲ್ಲಿ ಓರ್ವ ಶಿಕ್ಷಕ, ಈಗಿನ ಶಿಕ್ಷಣ ಸಚಿವರನ್ನು ಮೊದಲು ಬದಲಾಯಿಸಿ ಅಂತ ಹೇಳಿದ್ದಾರೆ. ರಾಜ್ಯಕ್ಕೆ ಬೇಜವಾಬ್ದಾರಿ ಶಿಕ್ಷಣ ಸಚಿವರು ಸಿಕ್ಕಿದ್ದು ಬೇಸರದ ಸಂಗತಿ'' ಎಂದು ಟೀಕಿಸಿದರು.
ಇದನ್ನೂ ಓದಿ:ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ರಾಜೇಶ್ ಜಿ.ವಿ. ಎತ್ತಂಗಡಿ! - Rajesh G V