ಬೆಂಗಳೂರು:ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗವು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಇಂದು (ಶುಕ್ರವಾರ) ಭೇಟಿ ಮಾಡಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ವಿರುದ್ಧ ದೂರು ಸಲ್ಲಿಸಿದೆ.
''ಬಾಲಕೃಷ್ಣ ಅವರ ಶಾಸಕ ಸ್ಥಾನವನ್ನು ರದ್ದು ಮಾಡಬೇಕು. ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನೂ ರದ್ದುಪಡಿಸಬೇಕು'' ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಲಾಯಿತು. ''ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ಮತ ನೀಡದಿದ್ದರೆ 5 ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲು ತಮ್ಮ ಪಕ್ಷದೊಂದಿಗೆ ಚರ್ಚಿಸುತ್ತೇನೆ ಎಂಬುದಾಗಿ ಅವರು ಹೇಳಿಕೆ ನೀಡಿರುತ್ತಾರೆ. ಇದು ಸಾರ್ವಜನಿಕರಿಗೆ ಬೆದರಿಕೆ ಮತ್ತು ಅವರ ಮತದಾನದ ನಡವಳಿಕೆಯನ್ನು ಭ್ರಷ್ಟಗೊಳಿಸುವ ಸ್ಪಷ್ಟ ಪ್ರಕರಣವಾಗಿದೆ'' ಎಂದು ಜೆಡಿಎಸ್ ತನ್ನ ದೂರಿನಲ್ಲಿ ತಿಳಿಸಿದೆ.
''ಜನತಾ ಪ್ರಾತಿನಿಧ್ಯ ಕಾಯಿದೆ ಪ್ರಕಾರ ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಅಥವಾ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಆ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡುವ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಬಾಲಕೃಷ್ಣ ಅವರು ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ'' ಎಂದು ದೂರು ಸಲ್ಲಿಸಿದ ನಂತರ, ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
''ಅಲ್ಲದೇ, ಹೆಚ್.ಸಿ. ಬಾಲಕೃಷ್ಣ ಅವರ ಹೇಳಿಕೆಯು ನಮ್ಮ ಸಂವಿಧಾನ ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ನಾನು ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ನ ಮಾನ್ಯತೆ ರದ್ದು ಮಾಡಲು ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರು ಸೇರಿದಂತೆ ಪಕ್ಷದ ಉನ್ನತ ನಾಯಕತ್ವದ ಪೂರ್ವಾನುಮತಿ ಇಲ್ಲದೇ ಅವರು ಯಾವುದೇ ಹೇಳಿಕೆ ನೀಡಿರುವ ಸಾಧ್ಯತೆ ಇಲ್ಲ. ಇಂತಹ ವರ್ತನೆಯನ್ನು ಜೆಡಿಎಸ್ ಮತ್ತು ಕರ್ನಾಟಕದ ಜನತೆ ಸಹಿಸುವುದಿಲ್ಲ'' ಎಂದು ಅವರು ಆರೋಪ ಮಾಡಿದರು.