ಕರ್ನಾಟಕ

karnataka

ETV Bharat / state

ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ: ವಿಶೇಷ ಸರಸ್ ಮೇಳ, ಖಾದಿ ಉತ್ಸವಕ್ಕೆ ಚಾಲನೆ - GANDHIJI STATUE AT VEERA SOUDHA

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನಿಮಿತ್ತ ವೀರಸೌಧದಲ್ಲಿ ಪ್ರತಿಷ್ಠಾಪಿಸಲಾದ ಗಾಂಧೀಜಿ ಪ್ರತಿಮೆಯನ್ನು ಸಿಎಂ ಸಿದ್ಧರಾಮಯ್ಯ ಆನಾವರಣ ಮಾಡಿದರು. ಫೋಟೋ ಗ್ಯಾಲರಿಗೆ ಡಿಸಿಎಂ ಡಿಕೆಶಿ ಚಾಲನೆ ನೀಡಿದರು.

GANDHIJI STATUE AT VEERA SOUDHA CM SIDDARAMAIAH  CONGRESS SESSION CENTENARY PROGRAM  ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ  BELAGAVI
ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ (ETV Bharat)

By ETV Bharat Karnataka Team

Published : Dec 26, 2024, 12:43 PM IST

ಬೆಳಗಾವಿ:ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ನಗರದ ಟಿಳಕವಾಡಿಯಲ್ಲಿನ ವೀರಸೌಧದಲ್ಲಿ ಗುರುವಾರ ಮಹಾತ್ಮಾ ಗಾಂಧೀಜಿಯವರ ನೂತನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ‌ ಅನಾವರಣಗೊಳಿಸಿದರು. ಜೊತೆಗೆ, ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ವಿಶೇಷ ಸರಸ್ ಮೇಳ ಮತ್ತು ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ತದನಂತರ ವೀರಸೌಧದ ಆವರಣದಲ್ಲಿನ ಗಾಂಧೀಜಿ ಸ್ಮಾರಕ ಭವನದಲ್ಲಿನ ನವೀಕೃತ ಪೋಟೋ ಗ್ಯಾಲರಿಯನ್ನು‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ವೀರಸೌಧದಲ್ಲಿ ಹಬ್ಬದ ವಾತಾವರಣ‌ ನಿರ್ಮಾಣವಾಗಿದೆ. ಇದೇ ವೇಳೆ ವೀರಸೌಧ (ಕಾಂಗ್ರೆಸ್ ಬಾವಿ) ಆವರಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಸಿ ನೆಟ್ಟು ನೀರೆರೆದರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಇದೇ ವೇಳೆ ಮುಖ್ಯಮಂತ್ರಿ ಚಾಲನೆ ನೀಡಿದರು.

ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ (ETV Bharat)

ವಿಶೇಷ ಸರಸ್ ಮೇಳ, ಖಾದಿ ಉತ್ಸವ:ನಗರದ ಟಿಳಕವಾಡಿಯಲ್ಲಿನ ವೀರಸೌಧದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ನೇರವಾಗಿ ಸರ್ದಾರ್ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಇನ್ನೀತರ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ 'ಅಸ್ಮಿತೆ' ವ್ಯಾಪಾರ ಮೇಳ-2024ವನ್ನು ಉದ್ಘಾಟಿಸಿದರು.

ಜನವರಿ 4ರವರೆಗೆ ಸರಸ್ ಮೇಳ:ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಈ ಸರಸ್ ಮೇಳ ಮತ್ತು ಖಾದಿ ಉತ್ಸವವು ಆರಂಭವಾಗಿದ್ದು, ಡಿ.26ರಿಂದ ಜನವರಿ 4ರವರೆಗೆ ನಡೆಯಲಿದೆ.

ಖಾದಿ ಉತ್ಸವಕ್ಕೆ ಸಿಎಂ ಚಾಲನೆ (ETV Bharat)

ಸ್ವ-ಸಹಾಯ ಗುಂಪಿನ ಮಹಿಳೆಯರು ಭಾಗಿ: ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದು, ಒಟ್ಟು 150 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮೇಳಗಳು ಒಳಗೊಂಡಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಡಿ.26ರಿಂದ ಜ.04ರವರೆಗೆ ಪ್ರತಿ ದಿನ ಬೆಳಿಗ್ಗೆ 10.30 ಯಿಂದ ರಾತ್ರಿ 9.30 ರವರೆಗೆ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ: ಪ್ರತಿ ದಿನ ಸಂಜೆ 6.30 ರಿಂದ 9.00 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿರುವ ಸತತ 4ನೇ ವರ್ಷದ ಈ ಮೇಳದಲ್ಲಿ ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡುವುದು ವಿಶೇಷತೆಯಾಗಿದೆ.

ಸಿಎಂ ಸಿದ್ದರಾಮಯ್ಯ, ಇತರರು (ETV Bharat)

ಆಕರ್ಷಣೀಯ ಅಕ್ಕ ಕೆಫೆ:ಸರ್ಕಾರವು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ 50 'ಅಕ್ಕ ಕೆಫೆ'ಗಳನ್ನು ಒಂದೇ ಮಾದರಿ ವಿನ್ಯಾಸದಡಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಅಂದಾಜು 1200 ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಮುಂದುವರೆದು, 'ಅಕ್ಕ-ಕಫೆ' ಕಾರ್ಯಕ್ರಮದ ಭಾಗವಾಗಿ ಈ ಮೇಳದ ಮೈದಾನದಲ್ಲಿನ ಆಹಾರ ಕೋರ್ಟ್‌ನ್ನು "ಅಕ್ಕ-ಕೆಫೆ" ಶೀರ್ಷಿಕೆಯಡಿ ಆಕರ್ಷಣೀಯವಾಗಿ ಸಿದ್ದಪಡಿಸಲಾಗಿದೆ.

ಸ್ಥಳದಲ್ಲೇ ಆಹಾರ ತಯಾರಿಕೆ:ಈ ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾದ ಗಿರಮಿಟ್/ಚುರುಮರಿ ಮಂಡಕ್ಕಿ, ಜೋಳದ ಖಡಕ್ ರೊಟ್ಟಿ ಸೇರಿದಂತೆ ಹೋಳಿಗೆ, ಮಂಗಳೂರು ನೀರ್‌ದೋಸೆ ಮತ್ತು ಮಾಂಸಹಾರಿ ಆಹಾರಗಳಾದ ಬ್ಯಾಂಬು ಬಿರಿಯಾನಿ ಮುಂತಾದವುಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತಿದೆ.

ಗಾಂಧೀಜಿಗೆ ಡಿ.ಕೆ.ಶಿವಕುಮಾರ್​ ಗೌರವ ಸಮರ್ಪಣೆ (ETV Bharat)

ವಿಶೇಷ ಅಭಿಯಾನ: ರಾಜ್ಯದಲ್ಲಿ ಅಭಿಯಾನದಡಿ 2.79 ಲಕ್ಷ ಸ್ವ-ಸಹಾಯ ಗುಂಪುಗಳಡಿ 29.66 ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಡಿ ಹಾಗೂ 45 ಸಾವಿರ ಸ್ವ-ಸಹಾಯ ಗುಂಪುಗಳಡಿ 4.50 ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಡಿ ಸಂಘಟಿಸಲಾಗಿದ್ದು, ಪ್ರತಿಯೊಬ್ಬ ಮಹಿಳೆಯು ಸ್ಮಾವಲಂಬನೆಯ ಬದುಕಿನೊಂದಿಗೆ ತನ್ನ ಕುಟುಂಬದ ಅಭಿವೃದ್ಧಿಗೆ ಪೂರಕ ಸೇವೆಗಳನ್ನು ಪಡೆಯುವಲ್ಲಿ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

ಉತ್ಪನ್ನಗಳಿಗೆ ಮಾರುಕಟ್ಟೆ:ರಾಜ್ಯದಲ್ಲಿ ಈ ಮಹಿಳೆಯರು ಉತ್ಪನ್ನಗಳ ಮಾರಾಟಕ್ಕೆ ಪ್ರತಿಯೊಂದು ಹಳ್ಳಿ, ಸಂತೆ, ತಾಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಏರ್ಪಡಿಸುವುದಷ್ಟೆ ಅಲ್ಲದೆ ಇತರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳಿಗೆ ರಾಜ್ಯದ ಮಹಿಳೆಯರನ್ನು ನಿಯೋಜನೆ ಮಾಡುವ ಮೂಲಕ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಕಳೆದ 3 ವರ್ಷದಿಂದ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದಂತೆ ಈ ವರ್ಷವು ಸಹ ಮೇಳ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ‌ನಿರ್ದೇಶಕಿ ಪಿ.ಐ.ವಿದ್ಯಾ ಅವರು ತಿಳಿಸಿದರು.

ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ (ETV Bharat)

ಇದನ್ನೂ ಓದಿ:ವೀರಸೌಧಕ್ಕೆ ಜನರ ದಂಡು: ಗಾಂಧೀಜಿ ಬೆಳಗಾವಿಗೆ ಬಂದಿದ್ದು ನಮ್ಮ ಅದೃಷ್ಟ!

ನವ ನವೀನ ಉತ್ಪನ್ನಗಳು:ಬೆಳಗಾವಿಯ ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್ ಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ ಅನೇಕ ಉತ್ಪನ್ನಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ.

ಕಾಂಗ್ರೆಸ್​ ನಾಯಕರಿಗೆ ಸ್ವಾಗತ ಕೋರುತ್ತಿರುವುದು (ETV Bharat)

ಬೆಳಗಾವಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು:ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಹಿನ್ನೆಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ಗಣ್ಯರಿಗೆ ಸ್ಥಳಿಯ ಕಾಂಗ್ರೆಸ್ ಮಹಿಳಾಮಣಿಗಳು ಆರತಿ ಬೆಳಗಿ ಹಣೆಗೆ ಕುಂಕುಮ ಇಟ್ಟು ಸ್ವಾಗತಿಸಿದರು. ಕನ್ಹಯ್ಯ ಕುಮಾರ್ ಸೇರಿದಂತೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ 120ಕ್ಕೂ ಅಧಿಕ ಗಣ್ಯರಿಗೆ ಸ್ವಾಗತಿಸಲಾಯಿತು. ದಾವಣಗೆರೆಯ ತಂಡದಿಂದ ಬಂಜಾರಾ ನೃತ್ಯದ ಮೂಲಕ ಸ್ವಾಗತ ಕೋರಲಾಯಿತು.

ಇದನ್ನೂ ಓದಿ:ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವಕ್ಕೆ ಕ್ಷಣಗಣನೆ: ರಾಷ್ಟ್ರೀಯ ನಾಯಕರ ಸ್ವಾಗತಕ್ಕೆ ಸಜ್ಜಾದ ಕುಂದಾನಗರಿ

ABOUT THE AUTHOR

...view details