ಕರ್ನಾಟಕ

karnataka

ETV Bharat / state

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ದುಸ್ವಪ್ನದಿಂದ ಮೋದಿ ಹೊರಬಂದಿಲ್ಲ: ಸಿದ್ದರಾಮಯ್ಯ

ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ, ಅಪಮಾನವನ್ನು ಕನ್ನಡಿಗರು ಬಹಳ ದಿನ ಸಹಿಸಲಾರರು. ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ ಎಂದು ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Nov 10, 2024, 8:04 AM IST

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲಿನ ದು:ಸ್ವಪ್ನದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಹೊರಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ, ಹೋದಲ್ಲಿ ಬಂದಲ್ಲಿ ಮೋದಿಯವರು ತಮ್ಮ ಭಾಷಣದಲ್ಲಿ ಕರ್ನಾಟಕವನ್ನು ಎಳೆದು ತರುತ್ತಿದ್ದಾರೆ. ಕರ್ನಾಟಕದ ಮದ್ಯ ಮಾರಾಟಗಾರರು ನೀಡಿರುವ ರಾಜಕೀಯಪ್ರೇರಿತ ದೂರು ಅಷ್ಟು ಬೇಗ ಮೋದಿಯವರನ್ನು ತಲುಪಿದೆ. ಕೊರೊನಾ ಕಾಲದ ಭ್ರಷ್ಟಾಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಪ್ರಾಸಿಕ್ಯೂಟ್ ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಸಮಿತಿ ಮಾಡಿರುವ ಶಿಫಾರಸಿನ ಸುದ್ದಿ ಅವರಿಗಿನ್ನೂ ತಲುಪಿಲ್ಲ ಎಂದು ಕಾಣುತ್ತಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ ಕೊರೊನಾ ಕಾಲದಲ್ಲಿ ಅಸಹಾಯಕ ಜನ ಸಾಯುತ್ತಿರುವಾಗ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸರ್ಕಾರ ಸಾವಿನ ವ್ಯಾಪಾರ ಮಾಡುತ್ತಿದ್ದದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?. ನಿಮ್ಮ ಪಕ್ಷದ ಸರ್ಕಾರ 40% ಕಮಿಷನ್ ಸುಲಿಗೆ ನಡೆಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಿಮಗೆ ಖುದ್ದಾಗಿ ದೂರು ನೀಡಿದರೂ ಆ ಬಗ್ಗೆ ನೀವು ತುಟಿ ಬಿಚ್ಚಿರಲಿಲ್ಲ. ಸಚಿವರೊಬ್ಬರ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ನೀವು ಪ್ರತಿಕ್ರಿಯಿಸಿರಲಿಲ್ಲ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಬೆಳಗ್ಗೆದ್ದು ಘೋಷಣೆ ಕೂಗುವ ನೀವು ತಮ್ಮ ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ ಯಾಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಕಾರ್ಯಕ್ರಮಗಳನ್ನು ನೂರಕ್ಕೆ ನೂರರಷ್ಟು ನಾವು ಅನುಷ್ಠಾನಕ್ಕೆ ತಂದಿದ್ದರೂ ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಸುಳ್ಳು ಹೇಳುವ ಜಾಹೀರಾತು ಪ್ರಕಟಿಸುತ್ತದೆ. ನೀವು ಹೇಳುತ್ತಾ ಬಂದಿರುವ ಸುಳ್ಳುಗಳಿಂದಲೇ ಅವರು ಪ್ರೇರಣೆ ಪಡೆದುಕೊಂಡಿರುವುದು ಸ್ಪಷ್ಟ. ನಾಯಕರೇ ಸುಳ್ಳುಕೋರರಾದರೆ ಅನುಯಾಯಿಗಳು ಸತ್ಯವಂತರಾಗಲು ಹೇಗೆ ಸಾಧ್ಯ? ಆಗಿರುವ ತಪ್ಪನಾದರೂ ಒಪ್ಪಿಕೊಂಡು ಕ್ಷಮೆ ಕೇಳಿ ಎಂದು ನಾನು ನಿಮ್ಮನ್ನು ಕೋರಿದ್ದೆ. ಆದರೆ ನೀವು ಇಲ್ಲಿಯ ವರೆಗೆ ಪ್ರತಿಕ್ರಿಯಿಸಿಲ್ಲ, ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೊಂಡಿರುವ ಗ್ಯಾರಂಟಿ ಯೋಜನೆಗಳು ನಿಮ್ಮ ಕಣ್ಣು ಕುಕ್ಕುತ್ತಿರುವುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಇದಕ್ಕಾಗಿ ಕರ್ನಾಟಕದ ಕಾಲೆಳೆಯುತ್ತಲೇ ಇದ್ದೀರಿ. ರಾಜ್ಯಕ್ಕೆ ಬರುವ ಹುಮ್ಮಸ್ಸಿನಲ್ಲಿರುವ ಉದ್ಯಮಿಗಳನ್ನು ನಿಮ್ಮ ಸ್ಥಾನದ ಬಲದಿಂದ ತಡೆದು ಗುಜರಾತ್​​ಗೆ ಕರೆದೊಯ್ದು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದೀರಿ. ನಮ್ಮ ಆದಾಯವನ್ನು ಕುಂಠಿತಗೊಳಿಸಬೇಕೆಂಬ ದುರುದ್ದೇಶದಿಂದ ನಮ್ಮ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದ್ದೀರಿ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರದೆ ಇದ್ದರೆ ಕನ್ನಡಿಗರು ಪ್ರಧಾನಿ ಕೋಪಕ್ಕೆ ತುತ್ತಾಗಲಿದ್ದಾರೆ ಎಂದು ಕಳೆದ ಚುನಾವಣೆಯ ಕಾಲದಲ್ಲಿ ನಿಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ನೀಡಿದ್ದ ಎಚ್ಚರಿಕೆ ಇಂದು ನಿಜವಾಗುತ್ತಿದೆ. ನೀವು ನಿರಂತರವಾಗಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ಅಪಮಾನವನ್ನು ಕನ್ನಡಿಗರು ಬಹಳ ದಿನ ಸಹಿಸಲಾರರು. ಮೊದಲು ನೀವು ನಮ್ಮೆಲ್ಲರಿಗೆ ಸೇರಿರುವ ದೇಶದ ಪ್ರಧಾನಿಯಾಗಿ, ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ. ಇದು ನನ್ನ ಸವಿನಯ ಮನವಿ ಎಂದು ಕೋರಿದ್ದಾರೆ.

ಇದನ್ನೂ ಓದಿ:'ಮಹಾ' ಚುನಾವಣೆಗಾಗಿ ಕರ್ನಾಟಕದಲ್ಲಿ ₹700 ಕೋಟಿ ಲೂಟಿ ಮಾಡಿದ ಕಾಂಗ್ರೆಸ್​: ಪ್ರಧಾನಿ ಮೋದಿ ಗಂಭೀರ ಆರೋಪ

ABOUT THE AUTHOR

...view details