ಬೆಂಗಳೂರು:"ವಕ್ಫ್ ತಾತ್ಕಾಲಿಕ ನೋಟಿಸ್ ಅಂತೇನಿಲ್ಲ, ನೋಟಿಸ್ ಕೊಟ್ಟಿದ್ದಾರೆ. ವಾಪಸು ತಗೋತೀವಿ ಅಂದ್ಮೇಲೆ ಮುಗಿಯಿತು" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ವಕ್ಫ್ನಿಂದ ತಾತ್ಕಾಲಿಕ ನೋಟಿಸ್ ಕೊಡಲಾಗಿತ್ತು ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದು ತಾತ್ಕಾಲಿಕ ಅಂತ ಏನಿಲ್ಲ, ನೋಟಿಸ್ ಕೊಟ್ಟಿದ್ದಾರೆ. ವಾಪಸ್ ತಗೋತಿವಿ ಅಂದ ಮೇಲೆ ಮುಗೀತು. ತಾತ್ಕಾಲಿಕ ಆಗಲೀ ಪರ್ಮನೆಂಟ್ ಆಗಲೀ ವಾಪಸ್ ಪಡೆದಿದ್ದಾಯ್ತಲ್ಲ. ಬಿಜೆಪಿಯವರು ಪ್ರತಿಭಟನೆ ಮಾಡಿ ರಾಜಕೀಯಕ್ಕೆ ಈ ವಿಚಾರವನ್ನು ಬಳಸಿಕೊಳ್ಳುತ್ತಾರೆ" ಎಂದರು.
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರು ರಾಜ್ಯಕ್ಕೆ ಬರುವ ವಿಚಾರ ಗೊತ್ತಿಲ್ಲ ಎಂದ ಅವರು, "ಸಿಎಂ ಅವರು ಯಾವುದೇ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ನಿಂದ ನೋಟಿಸ್ ಕೊಟ್ಟಿದ್ದರೆ ವಾಪಸ್ ತಗೊಳ್ಳಿ ಅಂತ ಸೂಚಿಸಿದ್ದಾರೆ. ನಿನ್ನೆ ಮತ್ತೆ ಎರಡನೇ ಬಾರಿಗೆ ಸೂಚನೆ ಕೊಟ್ಟಿದ್ದಾರೆ. ಅಲ್ಲಿಗೆ ಇದೆಲ್ಲವೂ ಸ್ಥಗಿತವಾಗಲಿದೆ" ಎಂದು ಹೇಳಿದರು.
"ಬಿಜೆಪಿಯವರು ರಾಜಕೀಯ ದುರುದ್ದೇಶಕ್ಕೆ ಆರೋಪ ಮಾಡುತ್ತಾರೆ. ಪ್ರತಿಭಟನೆ ಮಾಡೋದು ಅವರ ಹಕ್ಕು, ಮಾಡಲಿ. ಆದರೆ ನಾವು ಈ ಸಂಬಂಧ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೊಂಡಿದ್ದೇವೆ. ಬಿಜೆಪಿಯವರು ರೈತರ ಪರವಾಗಿ ಮೂರು ಕೃಷಿ ಕಾಯ್ದೆಗಳನ್ನು ಮಂಡಿಸಿದ್ದರು. ಅದರಿಂದ ಏನೆಲ್ಲ ತೊಂದರೆ ಆಯ್ತು, ಎಷ್ಟು ರೈತರು ಸತ್ತರು, ಬಿಜೆಪಿಯವರ ಸ್ಪಂದನೆ ಹೇಗಿತ್ತು ಅಂತ ವಿವರಿಸಿದರೆ ರೈತರ ಬಗ್ಗೆ ಅವರ ಬದ್ಧತೆ ಏನು ಅನ್ನುವುದು ಗೊತ್ತಾಗುತ್ತದೆ" ಎಂದು ಟೀಕಿಸಿದರು.
ಇದನ್ನೂ ಓದಿ:ಬಿಜೆಪಿ ಅಧಿಕಾರದಲ್ಲಿ ರೈತ ಕುಟುಂಬಗಳ ಆಸ್ತಿಗಳನ್ನು ವಕ್ಫ್ಗೆ ಖಾತೆ ಬದಲಾಯಿಸಿದ ದಾಖಲೆ ಶೀಘ್ರ ಬಿಡುಗಡೆ: ಸಿಎಂ