ಕರ್ನಾಟಕ

karnataka

ETV Bharat / state

ಆದಿವಾಸಿ, ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸದ್ಯದಲ್ಲೇ ಕ್ರಮ : ಸಿಎಂ

ಸಿಎಂ ಸಿದ್ದರಾಮಯ್ಯ ಅವರಿಂದು ಕೆರೆಹಾಡಿಗೆ ಭೇಟಿ ನೀಡಿ ಅರಣ್ಯವಾಸಿಗಳ ಬಾಯಿಂದಲೇ ಸಮಸ್ಯೆಗಳನ್ನು ಆಲಿಸಿದರು.

cm-siddaramaiah
ಅರಣ್ಯವಾಸಿಗಳ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Nov 12, 2024, 9:17 PM IST

ಮೈಸೂರು : ಆದಿವಾಸಿ / ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯ ಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಕೆರೆಹಾಡಿಗೆ ಭೇಟಿ ನೀಡಿ ಅರಣ್ಯವಾಸಿಗಳ ಬಾಯಿಂದಲೇ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಂದಲೂ ಮಾಹಿತಿ ಪಡೆದು, ಕೆಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಸಂಕೀರ್ಣವಾಗಿದ್ದ ಸಮಸ್ಯೆಗಳ ಕುರಿತಾಗಿ ವನ್ಯಜೀವಿ ಮಂಡಳಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಹಾಡಿಯ ಜನರೊಂದಿಗೆ ಕುಣಿದು ಕುಪ್ಪಳಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ತಕ್ಷಣ ಕರೆಂಟು-ನೀರು ಒದಗಿಸಿ : ಹಲವು ದಶಕಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ಕರೆಂಟಿಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ ಎನ್ನುವ ಆದಿವಾಸಿಗಳ ಮಾತು ಕೇಳಿ ಗರಂ‌ ಆದ ಸಿಎಂ, ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಿಗಳು ಅನಗತ್ಯ ಕಿರುಕುಳ, ತೊಂದರೆ ಕೊಡಬೇಡಿ ಎಂದು ಸ್ಪಷ್ಟ ಸೂಚನೆ ನೀಡಿದರು.

ಆದಿವಾಸಿಗಳಿಂದ ಜೇನುತುಪ್ಪ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ಒಂದು ತಿಂಗಳಲ್ಲಿ ಕರೆಂಟು, ನೀರು :ಆದಿವಾಸಿ ಗಣೇಶ, ರಮೇಶ ಎನ್ನುವವರ ಹಟ್ಟಿಯಲ್ಲೇ ನೆಲದ ಮೇಲೆ ಕುಳಿತು ಆದಿವಾಸಿಗಳ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಸಮಸ್ಯೆ ಆಲಿಸಿ, ಅರಣ್ಯಾಧಿಕಾರಿಗಳು ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಮುಖ್ಯಸ್ಥರ ಜೊತೆ ಚರ್ಚಿಸಿದರು.

ಹಾಡಿಯ ಜನರು ನೀಡಿದ ಸತ್ಕಾರವನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ಕೊನೆಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿಯವರು, "ಎಲ್ಲ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರ ಎಂಟು ಹಾಡಿಗಳಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸುತ್ತೇನೆ'' ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ವಾದ್ಯವನ್ನು ಮುಟ್ಟಿ ಪರೀಕ್ಷಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ವನ್ಯಜೀವಿ ಮಂಡಳಿ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಿ ಸೂಕ್ತ ತೀರ್ಮಾನ :ಹಕ್ಕುಪತ್ರ ಇದ್ದರೂ ಅರಣ್ಯಾಧಿಕಾರಿಗಳು ಮನೆ ಕಟ್ಟಲು ಬಿಡುತ್ತಿಲ್ಲ, ಎರಡು-ಮೂರು ಎಕರೆ ಜಾಗದಲ್ಲಿ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ಕೇವಲ 2,3 ಗುಂಟೆಗೆ ಹಕ್ಕು ಪತ್ರ ನೀಡಿದ್ದಾರೆ. ನಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಬಳಸಲು ಅವಕಾಶ ನೀಡುತ್ತಿಲ್ಲ ಎನ್ನುವುದೂ ಸೇರಿದಂತೆ ಸಾಲು ಸಾಲು ಸಮಸ್ಯೆಗಳನ್ನು ಹೇಳಿಕೊಂಡ ಆದಿವಾಸಿ ವೆಂಕಟೇಶ್, ನರಸಿಂಹ, ಭಾಗ್ಯಮ್ಮ ಮುಂತಾದವರ ಮಾತು ಕೇಳಿದ ಸಿಎಂ, ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದರು.

ಆದಿವಾಸಿಗಳು ವಾದ್ಯ ನುಡಿಸುತ್ತಿರುವುದನ್ನ ಆಲಿಸಿದ ಸಿಎಂ (ETV Bharat)

ಸಮಸ್ಯೆ ಜಟಿಲ ಆಗಿದೆ ಎನ್ನುವುದನ್ನ ಅರಿತ ಸಿಎಂ, ಆದಿವಾಸಿಗಳು ಅಂದರೆ ಅವರು ಅರಣ್ಯದ ಭಾಗವೇ ಆಗಿದ್ದಾರೆ. ಇವರಿಂದ ಅರಣ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದ್ದರಿಂದ ಇವರಿಗೆ ಅನಗತ್ಯ ತೊಂದರೆ ಕೊಡಬಾರದು ಎಂದು ತಾಕೀತು ಮಾಡಿದರು.

ಆದಿವಾಸಿಗಳೊಂದಿಗೆ ಸಿಎಂ ಸಿದ್ದರಾಮಯ್ಯ (ETV Bharat)

ಬಳಿಕ, ವನ್ಯಜೀವಿ ಮಂಡಳಿಗೆ ನಾನೇ ಅಧ್ಯಕ್ಷ ಆಗಿದ್ದೀನಿ. ಸದ್ಯದಲ್ಲೇ ಮಂಡಳಿ ಸಭೆ ಕರೆದು ನೀವು ಹೇಳಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತ್ಯೇಕ ಆದಿವಾಸಿ ನಿಗಮ : ನಾವು ಅಲೆಮಾರಿಗಳಲ್ಲ. ಊರ ನಾಯಕರೂ ಅಲ್ಲ. ನಾವು ಕಾಡಲ್ಲಿ ಒಂದೇ ಕಡೆ ನೆಲೆಸಿರುವ ಆದಿವಾಸಿಗಳು. ಆದ್ದರಿಂದ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ನಮ್ಮನ್ನು ಸೇರಿಸಬೇಡಿ. ನಮಗೆ ಪ್ರತ್ಯೇಕವಾದ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಎನ್ನುವ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತ್ಯೇಕ ಆದಿವಾಸಿ ನಿಗಮ‌ ಸ್ಥಾಪನೆ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಮೊದಲ ಮುಖ್ಯಮಂತ್ರಿ ನೀವು : ಆರೇಳು ತಲೆಮಾರುಗಳಿಂದ ನಾವಿಲ್ಲೇ ನೆಲೆಸಿದ್ದೇವೆ. ಆದಿವಾಸಿಗಳ ಹಾಡಿಗೆ ಬಂದ ಮೊದಲ ಮುಖ್ಯಮಂತ್ರಿ ನೀವೇ ಎಂದು ಆದಿವಾಸಿಗಳು ಕುಣಿದು ಸಂಭ್ರಮಿಸಿದರು.

ಬಣ್ಣ ಹಚ್ಚಿ ಕುಣ್ಕೊತಾ ಇರ್ಬೇಡಿ, ಚೆನ್ನಾಗಿ ಓದಿ : ಆದಿವಾಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ನಮ್ಮಪ್ಪ ಕೂಡ ಜನಪದ ಡ್ಯಾನ್ಸ್ ಕಲಿಯೋಕೆ ನನ್ನನ್ನು ಹಾಕ್ಬಿಟ್ಟಿದ್ದರು. ನಾನು ಹಠತೊಟ್ಟು ಕಾನೂನು ಪದವಿ ಮಾಡಿದ್ದಕ್ಕೆ ಇಂದು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದೆ. ನೀವೂ ಕೂಡ ಅರ್ಧಕ್ಕೇ ಶಾಲೆ ನಿಲ್ಲಿಸದೆ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಪಿಯುಸಿವರೆಗೂ ಆಶ್ರಮ ಶಾಲೆ : ಮೊದಲು ನಾಲ್ಕನೇ ತರಗತಿವರೆಗೂ ಮಾತ್ರ ಆಶ್ರಮ ಶಾಲೆಗಳಿದ್ದವು. ನೀವು ಅದನ್ನು ಎಂಟನೇ ತರಗತಿವರೆಗೂ ವಿಸ್ತರಿಸಿದ್ದೀರಿ. ಇದನ್ನು ಪಿಯುಸಿವರೆಗೂ ವಿಸ್ತರಿಸಿ ಎಂದು ಆದಿವಾಸಿಗಳು ಬೇಡಿಕೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ST ಒಳ‌ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬಂದಿಲ್ಲ : ಪರಿಶಿಷ್ಟ ಜಾತಿಯವರ ಒಳ ಮೀಸಲಾತಿಗೆ ಮುಂದಾಗಿರುವ ರೀತಿಯಲ್ಲೇ, ಪರಿಶಿಷ್ಟ ವರ್ಗದವರ ಒಳ ಮೀಸಲಾತಿಗೆ ಕ್ರಮ ವಹಿಸಿ ಆದಿವಾಸಿಗಳಿಗೆ ಅನುಕೂಲ ಮಾಡಬೇಕು ಎನ್ನುವ ಬೇಡಿಕೆಯೂ ಸಂವಾದದ ಸಂದರ್ಭದಲ್ಲಿ ಆದಿವಾಸಿಗಳು ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಸ್​ಸಿ ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರ ಆಧಾರದಲ್ಲಿ ಮುಂದುವರೆದಿದ್ದೇವೆ. ಎಸ್​ಟಿ ಒಳ ಮೀಸಲಾತಿ ಬಗ್ಗೆ ಏನೂ ತೀರ್ಪು ಬಂದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕಾಡುಗೆಣಸು-ಜೇನುತುಪ್ಪ- ಬೆಟ್ಟದ ನೆಲ್ಲಿ:ಆದಿವಾಸಿ ಗಣೇಶ ಮತ್ತು ರಮೇಶ್ ಕುಟುಂಬದವರು ತಮ್ಮ ಗುಡಿಸಲಿಗೆ ಬಂದ ಮುಖ್ಯಮಂತ್ರಿಗಳಿಗೆ ಕಾಡುಗೆಣಸು, ತಾವೇ ಕಿತ್ತು ತಂದಿದ್ದ ಜೇನುತುಪ್ಪ ಮತ್ತು ಬೆಟ್ಟದ ನೆಲ್ಲಿಕಾಯಿ ನೀಡಿ ಸತ್ಕರಿಸಿದರು. ಜೇನುತುಪ್ಪದಲ್ಲಿ ಕಾಡುಗೆಣಸು ಅದ್ದಿ ತಿಂದ ಮುಖ್ಯಮಂತ್ರಿಗಳು ಬಳಿಕ‌ 500 ರೂ. ನೀಡಿ ಜೇನುತುಪ್ಪ ಖರೀದಿಸಿದರು.

ಸಾಂಪ್ರದಾಯಿಕ ಹಾಡಿಗೆ ಧ್ವನಿಯಾಗಿ, ನೃತ್ಯಕ್ಕೆ ಹೆಜ್ಜೆ ಹಾಕಿದ ಸಿಎಂ : ಹಾಡಿಗೆ ಮುಖ್ಯಮಂತ್ರಿಗಳ ಪ್ರವೇಶ ಆಗುತ್ತಿದ್ದಂತೆ ತಮ್ಮ ಸಾಂಪ್ರದಾಯಿಕ ವೇಷದಲ್ಲಿ, ಸಾಂಪ್ರದಾಯಿಕ ಹಾಡು, ನೃತ್ಯಗಳ ಮೂಲಕ ಸ್ವಾಗತಿಸಿದರು. ಉಲ್ಲಾಸಗೊಂಡ ಮುಖ್ಯಮಂತ್ರಿಗಳು ಅವರ ಜೊತೆಗೆ ತಾವೂ ನೃತ್ಯ ಮಾಡಿ, ಅವರ ಹಾಡನ್ನು ಗುನುಗಿ ಖುಷಿಪಟ್ಟರು.

ಇದನ್ನೂ ಓದಿ :ಆದಿವಾಸಿಗಳ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಸಿಎಂ ಸಿದ್ದರಾಮಯ್ಯ: ವಿಡಿಯೋ

ABOUT THE AUTHOR

...view details