ಬೆಳಗಾವಿ: "ಜಾತಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಿರುವ ಪಟ್ಟಭದ್ರರು ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುವರ್ಣಸೌಧದಲ್ಲಿಂದು ಅನುಭವ ಮಂಟಪದ ತೈಲ ವರ್ಣಚಿತ್ರ ಅಳವಡಿಸಿರುವ ಸಂಬಂಧ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, "ಪರಮೇಶ್ವರ್, ಮುನಿಯಪ್ಪ, ಹೆಚ್.ಕೆ.ಪಾಟೀಲ್ ಮತ್ತು ನನ್ನನ್ನೂ ಸೇರಿ ಎಲ್ಲರ ಯೋಗ್ಯತೆಯನ್ನು ಜಾತಿಯ ಆಧಾರದ ಮೇಲೆ ಅಳೆಯುತ್ತಿದ್ರು. ನಾವೆಲ್ಲರೂ ಶೂದ್ರರೇ. ಅಶೋಕ್, ಅಶ್ವತ್ಥ ನಾರಾಯಣ್, ಯತ್ನಾಳ್ ನೀವೂ ಶೂದ್ರರೇ" ಎಂದರು.
"ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ. 12ನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ ಜಾತಿ ರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಮೇಲು-ಕೀಳು , ಮನುಷ್ಯ ತಾರತಮ್ಯ ಇರುವುದು ಧರ್ಮ ಆಗಲು ಸಾಧ್ಯವಿಲ್ಲ. ದಯೆಯೇ ಧರ್ಮದ ಮೂಲ ಎಂದು ಅವಿದ್ಯಾವಂತರಿಗೂ ಅರ್ಥ ಆಗುವಂತೆ ಧರ್ಮವನ್ನು ಬೋಧಿಸಿದರು" ಎಂದು ಹೇಳಿದರು.
"ಮದುವೆ ಕೂಡ ಜಾತಿ ಆಧಾರದಲ್ಲಿ ಏರ್ಪಡಿಸಲಾಗುತ್ತಿತ್ತು. ವ್ಯಕ್ತಿಯ ಯೋಗ್ಯತೆಯನ್ನು ಜಾತಿ, ವರ್ಣ ವ್ಯವಸ್ಥೆ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು. ಪ್ರತಿಭೆ ಕೂಡ ಯೋಗ್ಯತೆ ಆಧಾರದ ಮೇಲೆ ನಿರ್ಧಾರ ಆಗದೆ ಜಾತಿ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು. ಹುಟ್ಟುವಾಗ ಎಲ್ಲರೂ ವಿಶ್ವ ಮಾನವರೇ ಎಂದು ಕುವೆಂಪು ಹೇಳಿದರೆ, ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ" ಎಂದು ತಿಳಿಸಿದರು.