ಬೆಳಗಾವಿ: ಬಲಿಷ್ಠ ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ರಾಣಿ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ರಾಯಣ್ಣ ಮತ್ತು ಬಾಳಪ್ಪನವರು ಚನ್ನಮ್ಮಾಜಿ ಹೋರಾಟದಲ್ಲಿ ಜೊತೆಗಿದ್ದವರು. ಯುವಜನತೆಯಲ್ಲಿ ದೇಶಪ್ರೇಮ ಬೆಳೆಸಲು ಇವರ ಹೋರಾಟ ಸ್ಫೂರ್ತಿಯಾಗಿದೆ. ಜಾತಿ, ಧರ್ಮ ಬದಿಗಿಟ್ಟು ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸುವ ಮೂಲಕ ದೇಶಪ್ರೇಮವನ್ನು ಪ್ರದರ್ಶಿಸುವಂತೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಕಪ್ಪ ಕಾಣಿಕೆ ಏಕೆ ಕೊಡಬೇಕು ಎಂದು ಪ್ರಶ್ನಿಸುವುದರ ಜೊತೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ವಿರುದ್ಧ ಮೊಟ್ಟಮೊದಲ ಬಾರಿಗೆ ಯುದ್ಧ ಸಾರಿ ಜಯ ಗಳಿಸಿದವರು. ವಿಜಯೋತ್ಸವದ 200ನೇ ವರ್ಷಾಚರಣೆ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಬಾಬಾಸಾಹೇಬ್ ಪಾಟೀಲರ ಒತ್ತಾಯದ ಮೇರೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಚನ್ನಮ್ಮನವರ ಜಯಂತ್ಯೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದ್ದು ನಮ್ಮ ಸರ್ಕಾರ. ಅದು ಸಿದ್ದರಾಮಯ್ಯ ಸರ್ಕಾರ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಹಾಪುರುಷರ ಸ್ಮರಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಕಿತ್ತೂರು ಚನ್ಮಮ್ಮನವರ ವಿಜಯೋತ್ಸವವನ್ನು ಅದ್ಧೂರಿ ಮತ್ತು ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಂಡಿದ್ದಾರೆ. ಇನ್ನು ಶಾಸಕ ಬಾಬಾಸಾಹೇಬ ಪಾಟೀಲ ಓರ್ವ ಅತ್ಯುತ್ತಮ ಕೆಲಸಗಾರ. ಕಿತ್ತೂರು ವಸತಿ ಶಾಲೆಗೆ ಇಲಾಖೆಯ ವತಿಯಿಂದ 22 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
2 ವರ್ಷದಲ್ಲಿ ಕೋಟೆಯ ಚಿತ್ರಣ ಬದಲಾಗಲಿದೆ:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸ್ವಾಭಿಮಾನದ ರಕ್ತ ಮೈಯಲ್ಲಿ ಹರಿಯುತ್ತಿದ್ದರಿಂದ ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿ ಗೆಲುವು ಸಾಧಿಸಿದ್ದಕ್ಕೆ ಇಂದು ವಿಜಯೋತ್ಸವ ಆಚರಿಸುತ್ತಿದ್ದೇವೆ. ಕೋಟೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಾಧಿಕಾರಕ್ಕೆ ಈಗ 50 ಕೋಟಿಗೂ ಅಧಿಕ ಹಣ ಸಿಎಂ ನೀಡಿದ್ದಾರೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ನೀರಾವರಿ ಸೇರಿ ನಾವು ಕೇಳಿದ ಕೆಲಸಕ್ಕೆ ಹಣ ನೀಡಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ. ಎರಡು ವರ್ಷಗಳಲ್ಲಿ ಕೋಟೆ ಆವರಣದ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದರು ಹೇಳಿದರು.