ಬೆಂಗಳೂರು:ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ. ನಾನು ಮೂಗು ತೂರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೀವಮಾನ ಸಾಧನೆಗಾಗಿ ನೀಡುವ ವಿವಿಧ ಪ್ರಶಸ್ತಿಗಳನ್ನು 75 ಮಹನೀಯರಿಗೆ ನೀಡಿ ಸನ್ಮಾನಿಸಿ ಮಾತನಾಡುತ್ತಾ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಉತ್ತೇಜನ ನೀಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ನಮ್ಮ ಸರ್ಕಾರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದರು.
ದೇವಸ್ಥಾನಕ್ಕೆ ಇಷ್ಟದ ಉಡುಪು ಧರಿಸಿ ಹೋಗಬಹುದು: ಪ್ರಶಸ್ತಿಗಳ ಆಯ್ಕೆ ವಿಚಾರದಲ್ಲಿ ನಾನು ಬಹಳ ನಿಷ್ಠುರವಾಗಿ ವರ್ತಿಸುತ್ತೇನೆ. ನನ್ನ ಮೇಲೆ ಒತ್ತಡ ಹಾಕುವ ಎಲ್ಲರಿಗೂ ನಾನು ಅಷ್ಟೇ ನಿಷ್ಠುರವಾಗಿ ಹೇಳಿಬಿಡುತ್ತೇನೆ. ನಮ್ಮ ಸರ್ಕಾರ ಜನರ ನಂಬಿಕೆಗಳನ್ನು ಗೌರವಿಸುತ್ತದೆ. ಬಸವಣ್ಣನವರು ಮೌಢ್ಯಮುಕ್ತ, ಜಾತಿ ಮುಕ್ತ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಅದಕ್ಕೆ ದೇಹವೇ ದೇಗುಲ ಎಂದು ವಚನಕಾರರು ಪ್ರತಿಪಾದಿಸಿದ್ದಾರೆ. ಆದರೆ ಕೆಲವರು ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎಂಬ ನಂಬಿಕೆಯಿಂದ ಹೋಗುತ್ತಾರೆ. ಅವರ ನಂಬಿಕೆಯನ್ನೂ ಗೌರವಿಸುತ್ತೇವೆ. ದೇವಸ್ಥಾನಕ್ಕೆ ಹೋಗುವವರು ಅವರ ಇಷ್ಟದ ಉಡುಪು ಧರಿಸಿ ಹೋಗಬಹುದು. ಈ ವಿಚಾರದಲ್ಲೂ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದರು.
ದೇವರು, ಧರ್ಮದ ಬಗ್ಗೆ ಯಾರ ನಂಬಿಕೆ ಏನೇ ಇದ್ದರೂ ಎಲ್ಲರೂ ಮೊದಲು ಮನುಷ್ಯರಾಗಬೇಕು. ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಇದೇ ಅತ್ಯುನ್ನತ ಮೌಲ್ಯ. ರವೀಂದ್ರ ಕಲಾ ಕ್ಷೇತ್ರ ಮತ್ತು ಸಂಸ ರಂಗ ಮಂದಿರ ನವೀಕರಣಕ್ಕೆ ಇಷ್ಟೇ ಖರ್ಚು ಮಾಡಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 24 ಕೋಟಿ ರೂ ಖರ್ಚು ಮಾಡಿ ನವೀಕರಣ ಮಾಡಲಾಗುತ್ತಿದೆ ಎನ್ನುವುದು ಸರಿಯಲ್ಲ. ಮೊತ್ತದ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ ಎಂದು ತಿಳಿಸಿದರು.