ನವದೆಹಲಿ/ಬೆಂಗಳೂರು: ''ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ.58ರಷ್ಟನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲ ಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ''ರೈತರಿಗೆ ನೀಡುತ್ತಿದ್ದ ಸಬ್ಸಿಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ'' ಎಂದರು. ರಾಜ್ಯದ ರೈತರಿಗೆ ಮಾತ್ರ ನಬಾರ್ಡ್ ಸಾಲದ ಪ್ರಮಾಣ ಕಡಿಮೆ ಮಾಡಿಲ್ಲ. ಇಡೀ ದೇಶದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ''ಇದರಿಂದ ಇಡೀ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ'' ಎಂದು ಹೇಳಿದ್ದಾರೆ.
''ನಬಾರ್ಡ್ ಶೇ 4.5ರಷ್ಟು ಬಡ್ಡಿಗೆ ರೈತರ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ.10ರ ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ'' ಎಂದರು.