ಬೆಂಗಳೂರು:''ವಿಪಕ್ಷಗಳ ಸುಳ್ಳು ಆರೋಪ, ಅಪಪ್ರಚಾರ ಹಾಗೂ ಕೋಮುವಾದದ ವಿರುದ್ಧ ರಾಜ್ಯದ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
''ಮೂರು ಕ್ಷೇತ್ರದಲ್ಲಿಯೂ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ನಿರೀಕ್ಷೆಯಂತೆ ಮೂರು ಉಪಸಮರದಲ್ಲಿ ಗೆದ್ದಿದ್ದೇವೆ. ಶಿಗ್ಗಾಂವಿಯಲ್ಲಿ ಯಾಸಿರ್ ಪಠಾಣ್ 13,000, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ 25,500 ಹಾಗೂ ಸಂಡೂರಿನಲ್ಲಿ ಅನ್ನಪೂರ್ಣ ಅವರು 9,600 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿಯವರು ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಅಂತಿದ್ದರು. ಅವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ, ಪಂಚ ಗ್ಯಾರಂಟಿ ಬಗ್ಗೆ ಅಪಪ್ರಚಾರ ಮಾಡಿದ್ದರು. ವಾಲ್ಮೀಕಿ ಹಗರಣ, ಮುಡಾ ಸೈಟ್ ಹಂಚಿಕೆ ಹಗರಣ ವಿಚಾರವಾಗಿ ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದರು. ಪಾತ್ರ ಏನೂ ಇಲ್ಲವೆಂದರೂ ನನ್ನ ಮೇಲೆ ಆರೋಪ ಮಾಡಿದ್ದರು. ವಕ್ಫ್ ಆಸ್ತಿ ವಿಚಾರದಲ್ಲಿ ಕೋಮುವಾದ ಸೃಷ್ಟಿಸಲು ಯತ್ನಿಸಿದರು'' ಎಂದು ಸಿಎಂ ವಾಗ್ದಾಳಿ ನಡೆಸಿದರು.
''ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿಯವರು ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಇಬ್ಬಗೆಯ ನೀತಿ ಅನುಸರಿಸುತ್ತದೆ. ಬಸವರಾಜ ಬೊಮ್ಮಾಯಿ ಏನು ಹೇಳಿದ್ದರು, ವಕ್ಫ್ ಆಸ್ತಿ ಅತಿಕ್ರಮಣ ತೆರವು ಮಾಡುತ್ತೇವೆ ಅಂತಿದ್ದರು. ನಾವು ಈಗ ಏನು ಮಾಡುತ್ತಿದ್ದೇವೆ?. ಅವರ ಆಸ್ತಿ ಕಿತ್ತುಕೊಳ್ಳುತ್ತಿದ್ದೇವಾ?. ನಾನು ಯಾವ ರೈತರನ್ನೂ ಒಕ್ಕಲೆಬ್ಬಿಸುವ ಕೆಲಸ ಮಾಡಿಲ್ಲ. ಆರ್.ಅಶೋಕ್ ಕಾಂಗ್ರೆಸ್ ಪಾಪಿಗಳು ಅಂದಿದ್ದರು. ಈಗ ಯಾರು ಪಾಪಿಗಳು?. ಮೂರು ಕಡೆ ಜನರು ಉತ್ತರ ಕೊಟ್ಟಿದ್ದಾರೆ'' ಎಂದು ತಿಳಿಸಿದರು.
ಮೈತ್ರಿ ಎದುರು ನಾವು ಗೆದ್ದಿದ್ದೇವೆ:''25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಚನ್ನಪಟ್ಟಣ ಗೆದ್ದಿದ್ದೇವೆ. ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಎದುರು ನಾವು ಜಯಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗ, ಹಳೆ ಮೈಸೂರು, ಮುಂಬೈ ಕರ್ನಾಟಕದ ಭಾಗದಲ್ಲಿ ಗೆದ್ದಿದ್ದೇವೆ. ಇದೊಂದು ಮಹತ್ವದ ಫಲಿತಾಂಶ. ಹಳೆ ಮೈಸೂರು ಜೆಡಿಎಸ್ ಪ್ರಭಾವಿತ ಪ್ರದೇಶ, ಮುಂಬೈ ಕರ್ನಾಟಕ ಬಿಜೆಪಿಗರ ಪಾರುಪತ್ಯದ ಕ್ಷೇತ್ರ. ಈ ಎರಡರಲ್ಲೂ ನಾವು ಗೆದ್ದಿದ್ದೇವೆ. ಸುಳ್ಳು ಆರೋಪ ಮಾಡಿದರು, ಅಪಪ್ರಚಾರ ಮಾಡಿದರು. ಬೆಂಗಳೂರು - ಮೈಸೂರು ಪಾದಯಾತ್ರೆ ಮಾಡಿದ್ದರು'' ಎಂದರು.
''ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಮೋದಿಯವರು ಗ್ಯಾರಂಟಿಗಳನ್ನು ತಪ್ಪು ಹಣಕಾಸು ಕಾರ್ಯಕ್ರಮ ಅಂದರು. ಅದನ್ನು ಅವರು ಮಹಾರಾಷ್ಟ್ರದಲ್ಲಿ ಘೋಷಣೆ ಮಾಡಿದರು. ನಮ್ಮ ವಿರುದ್ಧ ಮಹಾರಾಷ್ಟ್ರದಲ್ಲಿ ಜಾಹೀರಾತು ನೀಡಿದರು. ಜಾರಿಯೇ ಮಾಡಿಲ್ಲ ಅಂತ ಸುಳ್ಳು ಜಾಹೀರಾತು ನೀಡಿದ್ದರು. 700 ಕೋಟಿ ರೂ. ಅಬಕಾರಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಹಾಗಾಗಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಅಂದಿದ್ದೆ. ದ್ವೇಷದ ರಾಜಕಾರಣ ಮಾಡಬಾರದು. ಸುಳ್ಳು ಆರೋಪ, ಅಪಪ್ರಚಾರ ಮಾಡಬಾರದು. ಇದಕ್ಕೆಲ್ಲ ರಾಜ್ಯದ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ'' ಎಂದು ಹೇಳಿದರು.
ದೇವೇಗೌಡರ ಆರೋಪ ನನಗೆ ಬೇಸರ ತಂದಿದೆ:''ದೇವೇಗೌಡರು ಸಿದ್ದರಾಮಯ್ಯರ ಸೊಕ್ಕು, ಗರ್ವ ಭಂಗ ಮಾಡಬೇಕು ಅಂದಿದ್ದರು. ಕಾಂಗ್ರೆಸ್ ಅನ್ನು ಕಿತ್ತು ಒಗೆಯಿರಿ ಅಂದಿದ್ದರು. ಮಾಜಿ ಪ್ರಧಾನಿಯಾಗಿದ್ದವರು ಈ ತರ ಆರೋಪ ಮಾಡಿದರು ಅಂತ ನನಗೆ ಬೇಸರವಾಗಿದೆ. ಅವರ ಜೊತೆ ನಾನು ಬಹಳ ದಿನ ಇದ್ದೆ. ಗೊತ್ತಿದ್ದು ಈ ರೀತಿ ಮಾತನಾಡಿದ್ದಾರೆ. ನಾನು ಅಧಿಕಾರದಲ್ಲಿದ್ದಾಗಲೂ ಒಂದೇ ತರ ಇರುತ್ತೇನೆ. ಇಲ್ಲದಿದ್ದಾಗಲೂ ಒಂದೇ ತರ ಇರುತ್ತೇನೆ. ನಾನು ಎರಡು ಬಾರಿ ಸಿಎಂ ಆಗಿದ್ದೆ. 40 ವರ್ಷ ಅಧಿಕ ರಾಜಕಾರಣದಲ್ಲಿದ್ದೇನೆ. ಯಾವತ್ತೂ ಕೂಡ ದುರಂಹಕಾರ ಮಾಡಿಲ್ಲ. ಗರ್ವದಿಂದ ವರ್ತಿಸಿಲ್ಲ'' ಎಂದರು.