ಬೆಂಗಳೂರು:ಸೋಮವಾರದಿಂದ ಪ್ರಾರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.
ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಸಿಎಂ ಸಿದ್ದರಾಮಯ್ಯನವರು ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಬಾರಿ ಸಂಪೂರ್ಣ ಬಜೆಟ್‌ಗೆ ಮಾರ್ಚ್ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ ಇದು ಬಜೆಟ್ ಬಗ್ಗೆ ಚರ್ಚಿಸುವ ಅಧಿವೇಶನ ಅಲ್ಲ. ಯಾವಾಗಲೂ ಮಾರ್ಚ್ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತಿತ್ತು. ಈ ಬಾರಿ ಪೂರ್ಣ ಬಜೆಟ್ ಅನುಮೋದನೆ ಆಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷದವರು ಈ ಬಾರಿಯ ಸಂಪೂರ್ಣ ಅಧಿವೇಶನವನ್ನು ವಿವಿಧ ಆರೋಪ ಮಾಡುವ ಕುರಿತು ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಸೂಚಿಸಿದರು.