ಕರ್ನಾಟಕ

karnataka

ETV Bharat / state

ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ - ಹಂಪಿ ಉತ್ಸವಕ್ಕೆ ಸಿಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು.

hampi fest
ಹಂಪಿ ಉತ್ಸವ

By ETV Bharat Karnataka Team

Published : Feb 3, 2024, 6:47 AM IST

Updated : Feb 3, 2024, 8:33 AM IST

ಹಂಪಿ (ಹೊಸಪೇಟೆ):ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿಯನ್ನು ಅರಿತಿರುವವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಇವರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.

ಬಸವಾದಿ ಶರಣರ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದರು.

ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ ಧರ್ಮದ ನಡುವೆ, ಜಾತಿ - ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣತೆ ನಮಗೆ, ನಿಮಗೆ ಮಾದರಿಯಾಗಲಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕರೆ ನೀಡಿದರು.

ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು, ಈಗ ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿ ಅದಕ್ಕೆ, "ಮೋದಿ ಗ್ಯಾರಂಟಿ" ಎಂದು ಹೆಸರಿಟ್ಟಿದ್ದಾರೆ ಎಂದು ಸಿಎಂ ವ್ಯಂಗ್ಯವಾಡಿದರು. ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರದಿಂದ ನಮ್ಮ ಪಾಲಿನ ನಯಾಪೈಸೆ ಇದುವರೆಗೂ ಬಂದಿಲ್ಲ. ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಪರಿಹಾರದ ಹಣವನ್ನು ಜಮಾ ಮಾಡಿದೆ. ನಮ್ಮ ಗ್ಯಾರಂಟಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ಹಣ ಉಳಿತಾಯ ಆಗಿ ಬರಗಾಲದ ಸಂಕಷ್ಟದಿಂದ ಬಡ ಮತ್ತು ಮಧ್ಯಮ ವರ್ಗದವರನ್ನು ಪಾರು ಮಾಡಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ದೊಡ್ಡ ರಾಜ್ಯ ಆಗಿದೆ. ವರ್ಷಕ್ಕೆ 4 ಲಕ್ಷ ಕೋಟಿ ತೆರಿಗೆಯನ್ನು ಕನ್ನಡಿಗರು ಕಟ್ಟುತ್ತಾರೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 50 ಸಾವಿರ ಕೋಟಿ. 15 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿದೆ. ಈ ಅನ್ಯಾಯವನ್ನು ಖಂಡಿಸಿ ಫೆ 7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಕರ್ನಾಟಕ ಮತ್ತು ಕನ್ನಡಿಗರ ಹಕ್ಕನ್ನು ಕೇಳಲು, ನಮ್ಮ ಪಾಲನ್ನು ನಮಗೆ ಕೊಡಿ ಎಂದು ಕೇಳಲು ನಡೆಸುತ್ತಿರುವ ಪ್ರತಿಭಟನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಕಾರ್ಯಕ್ರಮಗಳು ಎಲ್ಲ ಜಾತಿ, ಎಲ್ಲಾ ಧರ್ಮದ ಬಡವ ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ಪುನಃ ರಾಜ್ಯದಲ್ಲಿ ಮರುಕಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇತಿಹಾಸಕಾರ ಅಬ್ದುಲ್ ರಜಾಕ್ ಚಿತ್ರಿಸಿರುವುದನ್ನು ಉಲ್ಲೇಖಿಸಿ, ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಅಗತ್ಯ . ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು. ಹಂಪಿ ಉತ್ಸವದ ಪ್ರೇರಣಾ ಶಕ್ತಿ ಎಂ.ಪಿ.ಪ್ರಕಾಶ್ ಅವರನ್ನು ಸ್ಮರಿಸಿದರು.

ಹಂಪಿ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿ, ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗ0ಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ನಾಗೇಂದ್ರ, ಕೆಕೆಆರ್​​ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ, ಶಾಸಕರಾದ ಈ.ತುಕಾರಾಮ್, ಕಂಪ್ಲಿ ಗಣೇಶ್, ಲತಾ ಮಲ್ಲಿಕಾರ್ಜುನ್, ರಾಘವೇಂದ್ರ ಹಿಟ್ನಾಳ್ , ನಾರಾ ಭರತ್ ರೆಡ್ಡಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: ದೇಶ ಒಡೆಯುವ ಹೇಳಿಕೆ ಸಹಿಸಲ್ಲ ಎಂದ ಖರ್ಗೆ.. ವಿಷಯ ನೈತಿಕ ಸಮಿತಿಗೆ ಒಪ್ಪಿಸಬೇಕೆಂದು ಬಿಜೆಪಿ ಒತ್ತಾಯ

Last Updated : Feb 3, 2024, 8:33 AM IST

ABOUT THE AUTHOR

...view details