ಕರ್ನಾಟಕ

karnataka

ETV Bharat / state

ಕೋವಿಡ್ ಲಸಿಕೆ ಬಳಿಕ ಹೃದಯಾಘಾತ ಹೆಚ್ಚಳ?: ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ಸಿಎಂ ಸೂಚನೆ - CM SIDDARAMAIAH

ಕೋವಿಡ್/ಕೋವಿಡ್ ಲಸಿಕೆಯ ಬಳಿಕ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, Covid death study, covid vaccine
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Feb 7, 2025, 6:22 PM IST

ಬೆಂಗಳೂರು: ಕೋವಿಡ್ ಬಳಿಕ ಹೃದಯಾಘಾತ ಘಟನೆಗಳು ಹೆಚ್ಚುತ್ತಿರುವ ಕುರಿತು ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳ ಸಮಿತಿ ರಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ರಾಜ್ಯದಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳು ಮತ್ತು ನರ ಸಂಬಂಧಿ ಸೇರಿ ಮತ್ತಿತರ ಕಾರಣಗಳಿಂದಾಗಿ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಬಗ್ಗೆ ಮತ್ತು ಪ್ರತಿ ಸಾವು ಅವರ ಅವಲಂಬಿತ ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿರುವ ಬಗ್ಗೆ ಹಿರಿಯ ಪತ್ರಕರ್ತರೊಬ್ಬರು ಇತ್ತೀಚಿಗೆ ಇ-ಮೇಲ್ ಮೂಲಕ ಗಮನ ಸೆಳೆದಿದ್ದರು ಎಂದು ಸಿಎಂ ತಿಳಿಸಿದ್ದಾರೆ.

ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ, ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಪತ್ರಕರ್ತ ಕೋರಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂತಹ ಹಠಾತ್ ಸಾವುಗಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ, ವರದಿ ಪಡೆದು, ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:HMP ವೈರಸ್​ ಕೋವಿಡ್​-19ನಷ್ಟು ವೇಗವಾಗಿ ಹರಡುತ್ತದೆಯೇ? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ವೈದ್ಯರು ಹೇಳೋದು ಏನು?

ABOUT THE AUTHOR

...view details