ಬೆಂಗಳೂರು:ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಅಸಹಜ ಹೆಚ್ಚಳವಾಗಿರುವ ಕಡೆ ದರ ಕಡಿತ ಮಾಡುವಂತೆ ಬಿಎಂಆರ್‌ಸಿಎಲ್ ಎಂಡಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬಿಎಂಆರ್‌ಸಿಎಲ್ ಜಾರಿಗೊಳಿಸಿರುವ ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವೈಪರೀತ್ಯದಿಂದ ಕೂಡಿದೆ. ಕೆಲವು ಮಾರ್ಗಗಳಲ್ಲಿ ದುಪ್ಪಟ್ಟು ದರ ನಿಗದಿ ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಅಸಹಜವಾಗಿ ದುಪ್ಪಟ್ಟು ದರ ನಿಗದಿಯಾಗಿರುವ ಕಡೆ ದರ ಕಡಿತ ಮಾಡುವಂತೆ ಬಿಎಂಆರ್‌ಸಿಎಲ್ ಎಂಡಿಗೆ ಸಿಎಂ ಸೂಚನೆ ನೀಡಿ, ಪ್ರಯಾಣಿಕರ ಹಿತರಕ್ಷಣೆ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ಫೆ.9ರಂದು ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಿಸಿತ್ತು. ರಿಯಾಯಿತಿ ಮುನ್ನ ಟಿಕೆಟ್ ದರದಲ್ಲಿ ಸರಾಸರಿ ಶೇ.51.55 ರಷ್ಟು ಹೆಚ್ಚಳ ಮಾಡಿದ್ದರೆ, ರಿಯಾಯಿತಿ ನಂತರದ ಟಿಕೆಟ್ ದರದಲ್ಲಿ ಶೇ.45 - 46 ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ಹಲವು ಪ್ರಯಾಣಿಕರು ಅನೇಕ ಮಾರ್ಗಗಳ ಟಿಕೆಟ್ ದರದಲ್ಲಿ ಶೇ.100ರವರೆಗೂ ಹೆಚ್ಚಳವಾಗಿರುವುದಾಗಿ ದೂರಿದ್ದರು. ದರ ಏರಿಕೆಯಿಂದ ನಿತ್ಯ ಪ್ರಯಾಣಿಸುವವರು, ವಿದ್ಯಾರ್ಥಿಗಳು ಬೆಲೆ ತೆರಬೇಕಾಗುತ್ತಿದೆ ಎಂದು ಪ್ರಯಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ದಿನದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.
ಕೆಲ ತಾಂತ್ರಿಕ ದೋಷದಿಂದ ಈ ರೀತಿ ಕೆಲ ಮಾರ್ಗಗಳಲ್ಲಿ ಅಸಹಜ ಟಿಕೆಟ್ ದರ ಏರಿಕೆಯಾಗಿರುವುದಾಗಿ ಹೇಳಲಾಗಿದೆ. ಈಗಾಗಲೇ ಮೆಟ್ರೋ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಬೊಟ್ಟು ಮಾಡುತ್ತಿವೆ. ಇದು ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ಮೆಟ್ರೋ ಪ್ರಯಾಣಿಕರ ಜೇಬಿಗೆ ಬರೆ ಎಳೆದಂತಾಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಸಿಎಂ, ಇದೀಗ ಅಸಹಜ ದರ ಏರಿಕೆಯಾಗಿರುವ ರೂಟ್ಗಳಲ್ಲಿ ಕೂಡಲೇ ದರ ಕಡಿತಗೊಳಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಕೇಂದ್ರ ನೇಮಿಸುವ ಸಮಿತಿಯಿಂದ ನಿಗದಿ, ರಾಜ್ಯ ಸರ್ಕಾರವಲ್ಲ: ಸಿಎಂ ಸಿದ್ದರಾಮಯ್ಯ
ಮೆಟ್ರೋ ದರ ಇಳಿಸಬೇಕು ಎಂಬುದು ನಮ್ಮ ಅಭಿಪ್ರಾಯ: ಡಿಸಿಎಂ ಡಿ.ಕೆ.ಶಿವಕುಮಾರ್
ಮೆಟ್ರೋ ದರ ಇಳಿಸಬೇಕು ಎಂದು ನಮ್ಮ ಸರ್ಕಾರ ಅಭಿಪ್ರಾಯವನ್ನು ಬಿಎಂಆರ್ಸಿಎಲ್ಗೆ ತಿಳಿಸಿದ್ದು, ಅಂತಿಮ ತೀರ್ಮಾನ ಕೇಂದ್ರ ಸಮಿತಿಯದ್ದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧ ಮಾತನಾಡಿದ ಅವರು, ಬಿಎಂಆರ್‌ಸಿಎಲ್ ಮೆಟ್ರೋ ಟಿಕೆಟ್ ದರ ಕಡಿಮೆ ಮಾಡಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ನಮಗೂ ಅದಕ್ಕೂ ಸಂಬಂಧವಿಲ್ಲ. ಈ ವಿಚಾರ ರಾಜ್ಯ ಸರ್ಕಾರದ ಸುಪರ್ದಿಗೆ ಬರಲ್ಲ, ಇದಕ್ಕಾಗಿಯೇ ಕೇಂದ್ರ ಸಮಿತಿ ರಚಿಸಲಾಗಿದೆ. ಜನರ ಮನವಿ ಆಲಿಸಿ ಮುಖ್ಯಮಂತ್ರಿಗಳು ಮೆಟ್ರೋ ದರ ಇಳಿಸುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ ಎಂದಿದ್ದಾರೆ.
ಜನಸಾಮಾನ್ಯರು ಹಾಗೂ ಮೆಟ್ರೋ ಹಿತಾಸಕ್ತಿ ಕಾಯಲು ಯಾವ ನಿರ್ಧಾರ ಮಾಡುತ್ತಾರೋ ಮಾಡಲಿ. ಈ ದರ ನಿಗದಿಗೆ ನ್ಯಾಯಾಧೀಶರ ನೇತೃತ್ವದ ಪ್ರತ್ಯೇಕ ಕೇಂದ್ರ ಸಮಿತಿ ಮಾಡಲಾಗಿದೆ. ಆ ಸಮಿತಿಗೆ ನಾವು ನಮ್ಮ ಅಭಿಪ್ರಾಯ ತಿಳಿಸುತ್ತೇವೆ, ಅಂತಿಮ ನಿರ್ಧಾರ ಅವರದು ಎಂದು ಡಿಸಿಎಂ ತಿಳಿಸಿದರು.
ಮೆಟ್ರೋ ದರ ಏರಿಕೆ ಬಗ್ಗೆ ಸಿಎಂ ಸ್ಪಷ್ಟನೆ: ಮೆಟ್ರೋ ರೈಲಿನ ಪ್ರಯಾಣ ದರ ಹೆಚ್ಚಳವನ್ನು ಕೇಂದ್ರ ಸರ್ಕಾರ ನೇಮಿಸಿದ ಸಮಿತಿ ನಿಗದಿಪಡಿಸಿದೆ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಹಿಂದೆಯಷ್ಟೇ ಸ್ಪಷ್ಟಪಡಿಸಿದ್ದರು.
2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಬಳಿಕ ಕೇಂದ್ರ ಸರ್ಕಾರ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸದಸ್ಯರಾಗಿದ್ದರು. ಈ ಸಮಿತಿ ಮೂರು ತಿಂಗಳ ಕಾಲ ಸಮಾಲೋಚನೆ ನಡೆಸಿದ ಬಳಿಕ ಮೆಟ್ರೋ ಟಿಕೆಟ್ ದರ ನಿಗದಿ ಪಡಿಸಿದೆ.
ಇದನ್ನೂ ಓದಿ:ಇಂದಿನಿಂದ ನಮ್ಮ ಮೆಟ್ರೋ ದರ ಏರಿಕೆ: ಎಷ್ಟು ಕಿಲೋಮೀಟರ್‌ಗೆ ಎಷ್ಟು ಟಿಕೆಟ್?