ವಿಜಯಪುರ: ಆಲಮಟ್ಟಿ ಜಲಾಶಯ ಎತ್ತರದಿಂದ ಬಾಧಿತವಾಗುವ ಪ್ರದೇಶದಲ್ಲಿ ಪುನರ್‌ವಸತಿ, ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಿದ್ಧವಿದೆ. ಡ್ಯಾಂನ ಎತ್ತರ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ 2ನೇ ತೀರ್ಪು ಬಂದಿದೆ. ತೀರ್ಪಿನನ್ವಯ ಆಲಮಟ್ಟಿ ಎತ್ತರ ಹೆಚ್ಚಳದಿಂದಾಗಿ 130 ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದೆ. 130 ಟಿಎಂಸಿ ನೀರನ್ನು ಬಳಕೆ ಮಾಡಲು ಡ್ಯಾಂ ಎತ್ತರ ಹೆಚ್ಚಳ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಮಾತ್ರ ಎತ್ತರ ಹೆಚ್ಚಿಸಲು ಸಾಧ್ಯ. 519.6 ರಿಂದ 524.256 ಮೀ. ಎತ್ತರಿಸಿದಾಗ ಮಾತ್ರ 130 ಟಿಎಂಸಿ ನೀರು ದೊರೆಯಲಿದೆ. ಎತ್ತರ ಹೆಚ್ಚಳದಿಂದ 14.68 ಲಕ್ಷ ಎಕರೆ ಜಮೀನು ನೀರಾವರಿಗೊಳಪಟ್ಟು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪುನರ್ ವಸತಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಿದ್ಧವಿದ್ದು, ಈ ಹಿಂದೆ 52 ಸಾವಿರ ಕೋಟಿ ರೂ. ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಲೆಕ್ಕಾಚಾರ ಮಾಡಲಾಗಿತ್ತು. ಪ್ರಸ್ತುತ 82 ಸಾವಿರಕ್ಕೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ನೀರಾವರಿಗಾಗಿ 5 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಖರ್ಚು ಮಾಡುವ ಉದ್ದೇಶ ಹೊಂದಿರುವುದರಿಂದ ಅಧಿಸೂಚನೆ ಹೊರಡಿಸುವುದು ಅತ್ಯವಶ್ಯಕ. ಹೀಗಾಗಿ ಕೇಂದ್ರ ಸರ್ಕಾರ ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲಾಗುವುದು. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂದರು.
ಆಲಮಟ್ಟಿ ಡ್ಯಾಂ ಸಂಪೂರ್ಣವಾಗಿ ತುಂಬಿದೆ. ನೀರಿನ ಮಟ್ಟ 519.6 ಮೀ. ತಲುಪಿದೆ. ರಾಜ್ಯದಾದ್ಯಂತ ಇರುವ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಕಬಿನಿ, ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ, ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಭದ್ರಾ ಜಲಾಶಯ ಅಷ್ಟೇ ಅಲ್ಲದೇ ವಿದ್ಯುತ್ ಉತ್ಪಾದನೆ ಮಾಡುವ ಶರಾವತಿ, ಸೂಪಾ, ವಾಣಿ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ, ಬೊರ್ವೆಲ್ ನೀರು ಸುಲಭವಾಗಿ ದೊರೆಯಲಿದೆ. ಉತ್ತಮ ಬೆಳೆಯ ಇಳುವರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
130 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಡ್ಯಾಂನ 19ನೇ ಗೇಟ್ ಕಳಚಿ ಹೋಗಿದ್ದರಿಂದ ಬಾಗಿನ ಅರ್ಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಈಗಾಗಲೇ ಬೆಳೆಗಳಿಗೆ ನೀರು ಒದಗಿಸಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಮೂರು ರಾಜ್ಯಗಳ ರೈತರಿಗೆ ಅನುಕೂಲವಾಗುವ ಯೋಜನೆ ಇದಾಗಿದ್ದು, ಇನ್ನೂ 20 ಟಿಎಂಸಿ ನೀರು ಬಂದರೆ, ಶೇ.95 ಶೇಖರಣೆಯಾಗುತ್ತದೆ. ರೈತರಿಗೂ ಕೂಡ ನೀರು ಸಿಗುವುದಿಲ್ಲ ಎಂಬ ಆತಂಕವಿತ್ತು. ಆದರೆ ಕಳಚಿಹೋದ ಗೇಟ್ ದುರಸ್ತಿಗೊಳಿಸಿ ನೀರು ಪೋಲಾಗದಂತೆ ಕ್ರಮ ವಹಿಸಲಾಗಿದ್ದು, ಆದಷ್ಟು ಶೀಘ್ರ ಭರ್ತಿಯಾಗಲಿದೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.