ಬೆಂಗಳೂರು/ಬೆಳಗಾವಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ. ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಬೇರೆ ಜೈಲಿಗೆ ಶಿಫ್ಟ್ ಮಾಡಬೇಕೆಂಬ ಯೋಚನೆ ಇದೆ. ಯಾರ ಪರ ಅಂತಾ ಏನೂ ಇಲ್ಲ. ಸಂಬಂಧಿಸಿದ 7 ಜನ ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಗೃಹ ಸಚಿವ ಪರಮೇಶ್ವರ್ ಅವರಿಗೆ ಜೈಲಿಗೆ ಭೇಟಿ ನೀಡಿ, ಇದಕ್ಕೆಲ್ಲಾ ಯಾರು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಅಲ್ಲದೇ ಯಾರಾದ್ರೂ ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದರೆ, ಅವರ ವಿರುದ್ಧವೂ ಕ್ರಮ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ದುಡ್ಡಿದ್ದರೆ ಎಲ್ಲಾ ಸೌಲಭ್ಯ ಸಿಗುತ್ತದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ, ಜೋಶಿ ಯಾರ ಪರವಾಗಿದ್ದಾರೆ? ಬಡವರಿಗೆ ಜೋಶಿಯವರ ಕೊಡುಗೆ ಏನು? ನಾವು ಐದು ಗ್ಯಾರಂಟಿ ಕೊಟ್ಟಿದ್ದು ಯಾರ ಪರ? ಟೀಕೆ ಮಾಡಬೇಕು ಅಂತ ಮಾಡ್ತಿದ್ದಾರೆ. ಅವರಿಗೆ ಏನೂ ನೈತಿಕತೆ ಇದೆ ಎಂದು ಇದೇ ವೇಳೆ ಕಿಡಿಕಾರಿದರು.