ಬೆಂಗಳೂರು:ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೊಳಗೊಂಡ ಜಾತಿಗಣತಿ ವರದಿ ವಿಚಾರದಲ್ಲಿ ಮುಂದಿಡಬೇಕಾದ ಹೆಜ್ಜೆ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಕೈಗೊಂಡಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 43 ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕ್ಯಾಬಿನೆಟ್ ಸಭೆ ಅಜೆಂಡಾ ಮುಗಿದ ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕೊಟ್ಟಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಒಳಗೊಂಡ ಜಾತಿಗಣತಿ ವರದಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಮನವರಿಕೆ ಮಾಡಿದರು. ಮುಂದಿನ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಕ್ಯಾಬಿನೆಟ್ ಸದಸ್ಯರ ಸಲಹೆ ಪಡೆದು ಮುಂದುವರೆಯುವ ಭರವಸೆ ನೀಡಿದ ಸಿಎಂ ಬಿಜೆಪಿ ಮಾಡುವ ಆರೋಪಗಳಿಗೆ ತಿರುಗೇಟು ಕೊಡುವಂತೆ ಸೂಚನೆ ನೀಡಿದರು.