ಮಂಗಳೂರು: ಸಿಗರೇಟ್ ಸೇದುತ್ತಿರುವ ಸಂದರ್ಭದಲ್ಲಿ ನೀಡಲಾದ ಸಿಗಾರ್ ಲೈಟರ್ ವಾಪಸ್ ನೀಡದ ವಿಚಾರದಲ್ಲಿ ಕೋಡಿಬೆಂಗ್ರೆಯಲ್ಲಿ ಇತ್ತಂಡಗಳ ನಡುವೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಬಂಧಿತರು. ಇನ್ನು ಹಲವರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಜನವರಿ 12 ರಂದು ಮಧ್ಯರಾತ್ರಿ 12.45ಕ್ಕೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶಕಟ್ಟೆ, ತಣ್ಣೀರುಬಾವಿ ಎಂಬಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯಪಾನ ಮಾಡಿಕೊಂಡು ಸಿಗರೇಟ್ ಸೇದುತ್ತಿದ್ದರು. ಈ ಸಂದರ್ಭ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಸ್ಥಳಕ್ಕೆ ಬಂದು ಸಿಗಾರ್ ಲೈಟರ್ ಕೇಳಿದ್ದಾರೆ. ಪ್ರಜ್ವಲ್ ಸಿಗಾರ್ ಲೈಟರ್ ಅನ್ನು ಪ್ರೀತಂ ಹಾಗೂ ಇತರರಿಗೆ ನೀಡಿದ್ದು, ಅವರು ಸಿಗಾರ್ ಲೈಟರ್ ವಾಪಸ್ ಕೊಡದೇ ಇದ್ದಾಗ ಲೈಟರ್ ಕೊಡಿ ಎಂದು ಕೇಳಿದ್ದಾರೆ.
ಆಗ ನೀವು ಯಾಕೆ ಧಮ್ಕಿ ಹಾಕುತ್ತೀರಿ ಎಂದು ಹೇಳಿ ಅವರಲೊಬ್ಬ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ. ನಂತರ ಅವರಲ್ಲಿದ್ದವರ ಪೈಕಿ 4 - 5 ಜನರು ಮರದ ಕೋಲುಗಳಿಂದ ಪ್ರಜ್ವಲ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ. ನಂತರ ಅವರೊಳಗೆ ಪರಸ್ಪರ ಗಲಾಟೆ ನಡೆದಿದೆ. ಪರಸ್ಪರ ಹಲ್ಲೆ ಕುರಿತು ಪಣಂಬೂರು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಂ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಲಂ 118(1), 126(2), 189(2), 189(4), 190, 191(2), 191(3),352) ಅಡಿ ಪ್ರಕರಣ ದಾಖಲಾಗಿದೆ. ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಪ್, ಧನುಷ್, ಪ್ರಜ್ವಲ್ ಎಂಬವರು ಆರೋಪಿಗಳಾಗಿದ್ದು, ಅವರಲ್ಲಿ, ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬವರನ್ನು ಬಂಧಿಸಲಾಗಿದೆ.