ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಮನೆಗೆ ಸಿಐಡಿ ಅಧಿಕಾರಿಗಳ ತಂಡ ಇಂದು ಸಂಜೆ ಭೇಟಿ ನೀಡಿದೆ. ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ಎರಡನೇ ತಿರುವಿನಲ್ಲಿ ಇರುವ ಚಂದ್ರಶೇಖರ್ ಅವರ ಮನೆಗೆ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ಅವರ ನೇತೃತ್ವದಲ್ಲಿ ಒಟ್ಟು 6 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿಐಡಿ ತಂಡ ಸುಮಾರು 50 ನಿಮಿಷಗಳ ಕಾಲ ಮನೆಯಲ್ಲಿ ಶೋಧ ನಡೆಸಿದೆ.
ಇದೇ ವೇಳೆ, ಸಿಐಡಿ ತಂಡ ಮೃತ ಚಂದ್ರಶೇಖರನ್ ಅವರ ಪತ್ನಿ ಕವಿತಾ, ಮಕ್ಕಳಾದ ಚಿರತ್ ಹಾಗೂ ಚಿನ್ಮಯ್ ಹಾಗೂ ಕುಟುಂಬದ ಇತರ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ನಂತರ ಚಂದ್ರಶೇಖರನ್ ಬಳಸುತ್ತಿದ್ದ ಲ್ಯಾಪ್ಟಾಪ್ ಪರಿಶೀಲನೆ ನಡೆಸಿದ್ದಾರೆ. ನಂತರ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಸಂಬಂಧಪಟ್ಟಂತಹ ಪೆನ್ಡ್ರೈವ್ ಒಂದನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಉಳಿದಂತೆ ವಿಚಾರಣೆಯನ್ನು ಸಿಐಡಿ ತಂಡ ನಾಳೆ ನಡೆಸುವ ಸಾಧ್ಯತೆಗಳಿವೆ ಎಂಬುದು ತಿಳಿದು ಬಂದಿದೆ.