ಹುಬ್ಬಳ್ಳಿ:ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ನೇಹಾ ನಿವಾಸಕ್ಕೆ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ನಿರಂಜನ ಹಿರೇಮಠ ಮಾತನಾಡಿ, ಆರೋಪಿಗೆ ಶಿಕ್ಷೆ ಆದಾಗಲೇ ನನಗೆ ಸಮಾಧಾನ. ಖುದ್ದು ಸಿಐಡಿ ಡಿಜಿಪಿ ಅವರೇ ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಬಹುತೇಕ ತನಿಖೆ ಪೂರ್ಣಗೊಂಡಿರೋದಾಗಿ ಡಿಜಿಪಿ ಹೇಳಿದ್ದಾರೆ. ಕೆಲವೊಂದು ಮಾಹಿತಿ ಪಡೆಯಲು ಇಂದು ಮನೆಗೆ ಬಂದಿದ್ದರು. ಇದಾದ ನಂತರ ಚಾರ್ಜ್ಶೀಟ್ ಸಲ್ಲಿಸುವುದಾಗಿ ಹೇಳಿದ್ದಾರೆ. ನನ್ನ ಮಗಳ ಕೊಲೆಯೊಂದಿಗೆ ಇಂತಹ ಷಡ್ಯಂತ್ರ ಅಂತ್ಯವಾಗಬೇಕು. ಸಿಐಡಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ಮಾಡಿಬೇಕು ಅಂತ ಮನವಿ ಮಾಡಿದ್ದೇನೆ ಎಂದರು.
ನಮ್ಮ ಹೋರಾಟಕ್ಕೆ ನ್ಯಾಯ ಕೊಡಿಸಲಿ. ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲಿ. ನ್ಯಾಯ ಕೊಡಿಸುವ ಭರವಸೆಯನ್ನು ಅವರು ನಮಗೆ ಕೊಟ್ಟಿದ್ದಾರೆ. ಈ ಪ್ರಕರಣವನ್ನು ಮಾದರಿ ಕೇಸ್ ಆಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಮಗಳ ಕೊಲೆ ಪ್ರಕರಣದಲ್ಲಿ ಬುಡ ಸಮೇತ ತನಿಖೆ ಮಾಡಿ ಎಂದು ನಾನು ಹೇಳಿದ್ದೇನೆ. ನನ್ನ ಮಗಳ ಕೊಲೆ ಪೂರ್ವ ನಿಯೋಜಿತ ಕೃತ್ಯ. ಇಂತಹ ಕೊಲೆಗಳು ಇಲ್ಲಿಗೆ ಅಂತ್ಯ ಆಗಲಿ. ನನ್ನ ಮಗಳ ಕೊಲೆಯಲ್ಲಿ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಆ ಬಗ್ಗೆಯೂ ತನಿಖೆ ಮಾಡಲಿ ಎಂದು ಹೇಳಿದರು.
ಚಾರ್ಜ್ ಶೀಟ್ ಸಲ್ಲಿಕೆ ನಂತರ ನಾನು ಹೇಳಿದ್ದು ಏನು, ಅವರು ಮಾಡಿದ್ದು ಏನು ಎಂಬುದು ಗೊತ್ತಾಗುತ್ತದೆ. ಆನಂತರ ಈ ಬಗ್ಗೆ ಮುಂದೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.