ಬೆಂಗಳೂರು : ಚಿತ್ರಕಲಾ ಪರಿಷತ್ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತವಾಗಿದ್ದು, ಅದರ ಸೇವೆ ರಾಜ್ಯದ ಜನರಿಗೆ ತಲುಪಬೇಕಾಗಿದೆ. ರಾಜ್ಯದ ಇತರ ಭಾಗಗಳಿಗೂ ವಿಸ್ತರಣೆ ಮಾಡಬೇಕಾದ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್. ಕೆ ಪಾಟೀಲ್ ಸಲಹೆ ನೀಡಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ನಿಂದ ಶನಿವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಚಿತ್ರಕಲಾ ಪರಿಷತ್ನ ಸೇವೆ ಇತರೆಡೆಗೂ ತಲುಪುವಂತಾಗಿದ್ದು, ಪರಿಷತ್ತಿನ ಶಾಖೆಗಳು ರಾಜ್ಯಾದ್ಯಂತ ತೆಗೆಯಬೇಕು. ಗದಗ ಜಿಲ್ಲೆಯಲ್ಲಿ ಇದರ ಶಾಖೆ ತೆರೆಯಲು ಕೇಳಿದಷ್ಟು ಜಾಗದ ವ್ಯವಸ್ಥೆ ಮಾಡಲಾಗುವುದು. ನಾಡ ದೇವಿಯ ಮೊದಲ ಚಿತ್ರವನ್ನು ಕೊಟ್ಟಿದ್ದು ಗದಗ. ಇಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಬೇಂದ್ರೆ ಕೂಡ ಇಲ್ಲಿ ಸಾಹಿತ್ಯ ಕೃಷಿ ಮಾಡಿದ್ದರು. ಮನುಷ್ಯ ಯಾವುದರಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೊ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕರ್ನಾಟಕ ಚಿತ್ರಕಲಾ ಪರಿಷತ್ ರಾಷ್ಟ್ರದ ಶ್ರೇಷ್ಠ ಕಲಾ ಸಂಸ್ಥೆಯಾಗಿದೆ. ಪರಿಷತ್ತು ನಡೆಸುವ ವಾರ್ಷಿಕ ಚಿತ್ರಕಲಾ ಪ್ರದರ್ಶನ ಚಿತ್ರಸಂತೆ ಎಂದು ಕರೆದರೆ ಅದು ಚಿಕ್ಕದಾಗಲಿದ್ದು, ಅದೀಗ ಚಿತ್ರ ಜಾತ್ರೆಯಾಗಿ ಬೆಳೆದಿದೆ ಎಂದು ಹೇಳಿದರು.
ಈ ಹಿಂದೆ ಚಿತ್ರಕಲಾ ಪರಿಷತ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿತ್ತು. ಬೆಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ವಾಹನವನ್ನು ಮತ್ತೆ ಪುನರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. ಅಲ್ಲದೆ, ಇದೀಗ ಪ್ರಾರಂಭಿಸಿರುವ ಸಂಜೆ ಚಿತ್ರಕಲಾ ಕಾಲೇಜು ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಚಿತ್ರಕಲಾ ಪರಿಷತ್:ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಮಹಾ ನಿರ್ದೇಶಕ ಡಾ. ಸಂಜೀವ್ ಕಿಶೋರ್ ಗೌತಮ್ ಮಾತನಾಡಿ, ಚಿತ್ರಕಲಾ ಪರಿಷತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ರಷ್ಯಾ ಮೂಲದ ನಿಕೋಲಸ್ ರೋರಿಚ್ ಅವರಂತಹ ದಿಗ್ಗಜ ಕಲಾವಿದರ ಕಲಾಕೃತಿಗಳನ್ನು ಒಳಗೊಂಡು ಶ್ರೀಮಂತವಾಗಿದೆ. ಯುವ ಕಲಾವಿದರನ್ನು ಬೆಳೆಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು.