ಬೆಂಗಳೂರು: ನಗರದ ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಇಂದು ಆಯೋಜಿಸಿರುವ 22ನೇ ಚಿತ್ರ ಸಂತೆಯಲ್ಲಿ ಹಲವು ವಿಧದ ಮನಮೋಹಕ ಚಿತ್ರಕಲೆಗಳು ಕಲಾಭಿಮಾನಿಗಳಿಗೆ ಬೆರಗು ಮೂಡಿಸಿದವು. ಡಾಟ್ ಪೇಂಟಿಂಗ್, ರಿವರ್ಸ್ ಪೇಂಟಿಂಗ್ ಮತ್ತು ಕ್ಲೇ ಆರ್ಟ್ ಮೂಲಕ ಮೂಡಿ ಬಂದ ಕಲಾಕೃತಿಗಳು ಚಿತ್ರಸಂತೆಯ ಮೆರುಗು ಹೆಚ್ಚಿಸಿದವು.
ಡಾಟ್ಪೇಂಟಿಂಗ್ ವಿಶೇಷತೆಯೇನು?ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ವೃತ್ತಿಪರ ಚಿತ್ರಕಲಾವಿದ ಉಷಾರಂಜನ್ ಮಂಡಲ್ ಅವರ ಡಾಟ್ ಪೇಂಟಿಂಗ್ ವಿಶೇಷವಾಗಿ ಜನರ ಗಮನ ಸೆಳೆಯಿತು. ತರಹೇವಾರಿ ಪೆನ್ ಬಳಸಿ ಇವರೇ ಮುನ್ನೆಲೆಗೆ ತಂದಿರುವ ಕಲೆ ಇದಾಗಿದೆ. ಇಟಲಿಯಿಂದ ತರಿಸಲಾದ ವಿಶೇಷ ಪೇಪರ್ನಲ್ಲಿ ಆಕೃತಿ ಮೂಡಿಸಲು 3 ರಿಂದ 4 ತಿಂಗಳ ಕಾಲ ಸಮಯ ಬೇಕು. ಇದಕ್ಕೆ 40 ಸಾವಿರ ರೂ.ದಿಂದ ಲಕ್ಷಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ. ಸುಮಾರು 35 ಚಿತ್ರಕಲೆಗಳನ್ನು ಜನರು ಇಂದು ಖರೀದಿಸಿದರು.
ಈ ಡಾಟ್ ಪೇಂಟಿಂಗ್ಗಳನ್ನು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಪೇಂಟಿಂಗ್ನಲ್ಲಿ ವಿನೂತನ ಪೆನ್ ಮತ್ತು ಶಾಹಿ ಬಳಸಲಾಗುತ್ತದೆ. ಇದರಲ್ಲಿನ ಡಿಟೈಲಿಂಗ್ ಬೇರೆ ಚಿತ್ರಕಲೆಗೆ ಹೋಲಿಸಿದರೆ ಅತ್ಯತ್ತಮವಾಗಿದೆ. ಫುಲ್ ಶೀಟ್ ಪೇಂಟ್ ಮಾಡಲು 4 ತಿಂಗಳಿಗಿಂತ ಅಧಿಕ ಸಮಯ ಹಿಡಿಯುತ್ತದೆ. ಚಿತ್ರ ಸಂತೆಯಲ್ಲಿ ಕೂಡ ಒಳ್ಳೆಯ ವಿಮರ್ಶೆ ದೊರೆತಿದೆ ಎಂದು ಉಷಾರಂಜನ್ ಮಂಡಲ್ ಹೇಳಿದರು.
ರಿವರ್ಸ್ ಪೇಂಟಿಂಗ್ ಎಂಬ ಸೋಜಿಗ :ಇನ್ನು, ಕಲಾಸಂತೆಯಲ್ಲಿ ರಿವರ್ಸ್ ಪೇಂಟಿಂಗ್ ಕೂಡ ವಿಶೇಷವಾಗಿ ಕಂಡುಬಂತು. ಗ್ಲಾಸ್ ಮೇಲೆ ಚಿತ್ರಕಲೆಯನ್ನು ಕೊನೆಯಿಂದ ಮೊದಲಿನ ಮಾದರಿಯಲ್ಲಿ ಬಿಡಿಸಲಾಗುತ್ತದೆ. ಗ್ಲಾಸ್ ಫ್ರೇಮ್ನ ಹಿಂದಿನಿಂದ ಬಿಡಿಸುವುದು ಸಹ ಈ ಚಿತ್ರಕಲೆಯ ವಿಶೇಷತೆಯಾಗಿದೆ. ಈ ಆಕೃತಿ ಬಿಡಿಸಲು ಸುಮಾರು 1 ವಾರ ಬೇಕು. ಇದು ಚಿತ್ರಸಂತೆಯಲ್ಲಿ ಕೋಲ್ಕತ್ತಾದ ಶಾಂತಿನಿಕೇತನ ಕಲಾ ಶಾಲೆಯ ವಿದ್ಯಾರ್ಥಿ ಸದ್ಯಕ್ಕೆ ತುಮಕೂರಿನಲ್ಲಿ ನೆಲೆಸಿ ಮಕ್ಕಳಿಗೆ ಕಲಾ ಶಿಕ್ಷಣ ನೀಡುತ್ತಿರುವ ಸುಭಾಶಿಶ್ ಅವರದ್ದಾಗಿದೆ.