ಬೆಂಗಳೂರು: ಯಲಹಂಕದ ಹಾರೋಹಳ್ಳಿಯಲ್ಲಿರುವ ಎಂಎಲ್ಎ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್ ಅಕಾಡೆಮಿಯಲ್ಲಿ ಆತ್ಮರಕ್ಷಣೆಗಾಗಿ ಕರಾಟೆ ಕಲಿಸಲಾಗುತ್ತಿದೆ. ಇದರೊಂದಿಗೆ ಇಲ್ಲಿನ ಹೊರರಾಜ್ಯದ ಸ್ಪರ್ಧಿಗಳಿಗೆ ಕನ್ನಡವನ್ನೂ ಕಲಿಸಲಾಗುತ್ತಿದೆ. ಈ ಮೂಲಕ ಕರಾಟೆಯೊಂದಿಗೆ ಕನ್ನಡದ ಸ್ವಾದ ಸವಿಯುವ ಅವಕಾಶ ಒದಗಿಸಲಾಗಿದೆ.
ಈ ಅಕಾಡೆಮಿ ಪ್ರಾರಂಭವಾಗಿ ಎರಡು ವರ್ಷವಾಗುತ್ತಿದೆ. ಮಾಜಿ ಯೋಧ ಮಾಲತೇಶ್ ಶಾಲೆಯ ಸ್ಥಾಪಕರು. 20 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಈಗ ತಮ್ಮದೇ ಕರಾಟೆ ಶಾಲೆ ತೆರೆದು ಮಕ್ಕಳಿಗೆ ಆತ್ಮರಕ್ಷಣೆ ಕಲೆ ಮತ್ತು ಸದೃಢ ದೇಹ ಕಾಪಾಡಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ.
ಇಲ್ಲಿನ ಮಕ್ಕಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ. ಹೆಬ್ಬಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 10 ಮಕ್ಕಳು ಚಿನ್ನ ಜಯಿಸಿದ್ದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಕನ್ನಡಪರ ಹೋರಾಟಗಾರ ನಾಗೇನಹಳ್ಳಿ ಕೃಷ್ಣಮೂರ್ತಿ ಕನ್ನಡದ ಶಾಲು ಹೊದಿಸಿ ಗೌರವಿಸಿದ್ದಾರೆ.
ಎಂಎಲ್ಎ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್ ಅಕಾಡೆಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಮಾರ್ಷಲ್ ಆರ್ಟ್ ಕಲಿಯುತ್ತಿದ್ದಾರೆ. ವಿಶೇಷವಾಗಿ ಪಂಜಾಬ್, ಗುಜರಾತ್, ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳಿದ್ದಾರೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿರುವ ಇವರು ಭಾಷೆಯನ್ನೂ ಕಲಿತು ಇದೀಗ ಕನ್ನಡಿಗರೂ ಆಗಿದ್ದಾರೆ.