ಹಾವೇರಿ:ಮೇ 12ನ್ನು ವಿಶ್ವ ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ತಾಯಿಯ ಮಮತೆ, ವಾತ್ಸಲ್ಯ ಪ್ರೀತಿ ಪ್ರತಿದಿನವೂ ಸುತ್ತ್ಯಾರ್ಹವೇ. ಹೀಗಿದ್ದರೂ ಅದಕ್ಕೊಂದು ವಿಶೇಷ ದಿನ ಮೀಸಲಿಡಲಾಗಿದೆ. ಈ ದಿನದ ವಿಶೇಷತೆ ಹೆಚ್ಚಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಅಣ್ಣಪ್ಪ ಲಮಾಣಿ ಮತ್ತು ಸಹೋದರರ ಕೈಂಕರ್ಯ ಗಮನ ಸೆಳೆಯುತ್ತಿದೆ.
ಈ ಸಹೋದರರು ಅಗಲಿದ ತಮ್ಮ ತಾಯಿಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ದೇಗಲದೊಳಗೆ ತಾಯಿಯ ಮೂರ್ತಿಯನ್ನಿಟ್ಟು ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ. ನೀವು ನೋಡುತ್ತಿರುವುದು ಹೇಮಲವ್ವ ಎಂಬ ಮಹಿಳೆಯ ಮೂರ್ತಿ. ಇವರಿಗೆ ಅಣ್ಣಪ್ಪ, ನೂರಪ್ಪ, ತಾವರೆಪ್ಪ ಮತ್ತು ವೀರಪ್ಪ ಎಂಬ ನಾಲ್ವರು ಗಂಡು ಮಕ್ಕಳಿದ್ದಾರೆ. 1998ರಲ್ಲಿ ಇವರು ಅನಾರೋಗ್ಯದಿಂದ ಅಸುನೀಗಿದ್ದರು.
ಇದರಿಂದ ಮನನೊಂದ ಅಣ್ಣಪ್ಪ ಮತ್ತು ಸಹೋದರರು ಅಗಲುವಿಕೆಯ ನೋವಿನಿಂದ ಹೊರಬರಲು ತಾಯಿಯ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಅದರಂತೆ, 2010ರಲ್ಲಿ ಬಾಳೂರು ತಾಂಡಾದಲ್ಲಿ 5 ಲಕ್ಷ ರೂಪಾಯಿ ವ್ಯಯಿಸಿ ಮಾತಾ ದೇವಸ್ಥಾನ ಕಟ್ಟಿಸಿದ್ದಾರೆ. ಬನವಾಸಿಯ ಕಲಾವಿದರಿಂದ ಕೃಷ್ಣಶಿಲ್ಪದಲ್ಲಿ ತಾಯಿಯ ಮೂರ್ತಿ ಕೆತ್ತಿಸಿದ್ದಾರೆ. ಅಂದಿನಿಂದ ಪ್ರತಿನಿತ್ಯ ತಾಯಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಹೇಮಲವ್ವ ಅವರಿಗೆ ಲಂಬಾಣಿ ದಿರಿಸೆಂದರೆ ಪಂಚಪ್ರಾಣವಂತೆ. ಅವರ ಆಸೆಯಂತೆಯೇ ಲಂಬಾಣಿ ವೇಷದಲ್ಲಿರುವ ಮೂರ್ತಿಯನ್ನು ನೋಡಬಹುದು. ಯುಗಾದಿ, ಪಂಚಮಿ, ನವರಾತ್ರಿ, ದೀಪಾವಳಿಯ ಈ ದಿನಗಳಂದು ಮಾತಾಜಿ ದೇವಾಲಯ ಜನರಿಂದ ತುಂಬಿರುತ್ತದೆ.