ಚಿಕ್ಕೋಡಿ :ಜೋಳ ಬೆಳೆಯುವುದು ಒಂದು ತಪಸ್ಸಿನಂತೆ. ಇದರ ಬೆಳವಣಿಗೆಗೆ ನಾನಾ ಸಂಕಟಗಳು ಎದುರಾಗುತ್ತವೆ. ಮುಖ್ಯವಾಗಿ ಹವಾಮಾನ ವೈಪರೀತ್ಯದಿಂದ ಉಂಟಾಗುವ ರೋಗಗಳ ಕಾಟ ಹಾಗೂ ಪ್ರಮುಖವಾಗಿ ಹಕ್ಕಿಗಳ ಕಾಟ ರೈತನಿಗೆ ಸವಾಲೇ ಸರಿ. ಹಿಂದಿನ ಕಾಲದಲ್ಲಿ ಹಕ್ಕಿಗಳ ಕಾವಲಿಗಾಗಿ ಕವಣಿ ಆಡಿಸುವುದು ಹಾಗೂ ಲಡ್ ಬಾರಿಸುವುದನ್ನು ಮಾಡುತ್ತಿದ್ದರು. ಆದರೆ ಆಧುನಿಕತೆ ಬೆಳೆದಂತೆ ಇವೆಲ್ಲ ಕಣ್ಮರೆಯಾಗುತ್ತಿವೆ. ಅಪರೂಪಕ್ಕೆ ಎಂಬಂತೆ ಉ.ಕ. ದ ಮಹಾವೀರ ಪಡಸಲಗಿ ಈ ಎಲ್ಲ ಕಲೆಗಳನ್ನು ಪೋಷಿಸುತ್ತಿದ್ದು, ಈಗಿನ ಯುವಜನತೆಗೆ ಜೋಳ ಬೆಳೆಯುವ ಮಾಹಿತಿ ಕೇಂದ್ರದಂತಾಗಿದ್ದಾರೆ.
ಸರಿ ಸುಮಾರು ನಾಲ್ಕು ಎಕರೆಯಲ್ಲಿ ಬೆಳೆದ ಜೋಳವನ್ನು ಕಾಯಲು ಈ ಪದ್ಧತಿ ಅನುಸರಿಸುವ ಮೂಲಕ ಪ್ರತಿವರ್ಷವೂ ಒಬ್ಬರೇ ಹಕ್ಕಿಗಳಿಂದ ಜೋಳದ ರಕ್ಷಣೆ ಮಾಡುತ್ತಿದ್ದಾರೆ. ಇಂದಿನ ಯುವ ಪೀಳಿಗೆಗೆ ಅರಿವಿಲ್ಲದಿರುವ ಕವಣೆ ಹಾಗೂ ಲಡ್ ಬಾರಿಸುವ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾವ ಗ್ರಾಮದ ಮಹಾವೀರ ಪಾರಂಪರಿಕ ಕೃಷಿ ಚಟುವಟಿಕೆ ಮುಂದುವರೆಸಿ ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿರುವ ಯುವಕರಿಗೆ ಮಾದರಿಯಾಗಿದ್ದಾರೆ.
ಆಧುನಿಕತೆ ಬೆಳೆದರು ಪಾರಂಪರಿಕ ವಿಧಾನ ಬಿಡದ ಉತ್ತರ ಕರ್ನಾಟಕ ರೈತ (ETV Bharat) ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಚಟುವಟಿಕೆಗಳು ದೂರ :ಆಧುನಿಕತೆಯು ಬೆಳೆದಂತೆಲ್ಲ ಹಳೆಯ ಕಾಲದ ಆಚರಣೆಗಳು, ವಿಚಾರಗಳು ನಮ್ಮಿಂದ ದೂರವಾಗುತ್ತಿವೆ. ಪ್ರಾಚೀನ ಕಾಲದಲ್ಲಿನ ಹಿರಿಯರ ಕಾಲದಲ್ಲಿನ ಅದೆಷ್ಟೋ ಸಾಂಪ್ರದಾಯಿಕ ಚಟುವಟಿಕೆಗಳೂ ಸಹ ನಮ್ಮಿಂದ ಅಂತರ ಕಾಯ್ದುಕೊಂಡು ದಶಕಗಳೇ ಕಳೆದಿವೆ. ಅದು ಯಾವುದೇ ಕ್ಷೇತ್ರದಲ್ಲಾಗಲಿ ಪ್ರಾಚೀನತೆಯ ಗಂಧ ಗಾಳಿಯೂ ಇಂದಿನ ದಿನಗಳಲ್ಲಿ ಸುಳಿಯುತ್ತಿಲ್ಲ. ಆ ಮಟ್ಟಿಗೆ ಆಧುನಿಕ ಯುಗವು ಜನರ ಬದುಕಿನ ಮೇಲೆ ಅಗಾಧ ಪರಿಣಾಮ ಬೀರಿದೆ.
ಅದೂ ಇಂದಿನ ಕೃಷಿ ಪದ್ಧತಿಗೂ ಸಾಕಷ್ಟು ಹೊಡೆತ ನೀಡಿದ್ದು, ಅನಿವಾರ್ಯವಾಗಿ ರೈತರೂ ಸಹ ಪ್ರಾಚೀನತೆಯಿಂದ ಆಧುನಿಕತೆಯತ್ತ ವಾಲುವ ಸನ್ನಿವೇಶ ಸೃಷ್ಟಿಯಾಗಿದೆ. ಪ್ರತಿಕೂಲ ಹವಾಮಾನದ ಪರಿಣಾಮ ಕೃಷಿ ಕ್ಷೇತ್ರಕ್ಕೆ ಇದರಿಂದ ಅಪಾರ ನಷ್ಟವಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಬೆಳೆಗಳಲ್ಲಿ ಒಂದಾಗಿರುವ ಬಿಳಿ ಜೋಳ ಬೆಳೆಯುವುದು ಒಂದು ತಪಸ್ಸಿನತಂತೆಯೇ ಸಾಗುವ ಪ್ರಕ್ರಿಯೆಯಾಗಿದೆ. ಐದು ತಿಂಗಳುಗಳ ಕಾಲ ನಡೆಯುವ ಇದರ ಪಾಲನೆ ಪೋಷಣೆಯು ಇತರ ಎಲ್ಲ ಬೆಳೆಗಳಿಗಿಂತ ವಿಭಿನ್ನ.
ಆಧುನಿಕತೆ ಬೆಳೆದರು ಪಾರಂಪರಿಕ ವಿಧಾನ ಬಿಡದ ಉತ್ತರ ಕರ್ನಾಟಕ ರೈತ (ETV Bharat) ಜೋಳದ ಬಿತ್ತನೆಯ ಬಳಿಕ ಅದಕ್ಕೆ ಕಾಲಕ್ಕೆ ಸರಿಯಾಗಿ ನೀರುಣಿಸುವುದು, ಕಳೆ ಕೀಳುವುದು, ಎಡೆ ಹಾಯಿಸುವುದು (ಜೋಳದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವುದು) ಹೀಗೆ ವಿವಿಧ ಹಂತಗಳಲ್ಲಿ ಜೋಳದ ಪೋಷಣೆ ಮಾಡಬೇಕಾಗುತ್ತದೆ. ಅಲ್ಲದೇ ಇಷ್ಟೊಂದು ಶ್ರಮದಿಂದ ಜೋಳ ಬೆಳೆಯುವ ರೈತರಿಗೆ ಹವಾಮಾನದ ವೈಪರಿತ್ಯದಿಂದ ಕೀಟಗಳ ಕಾಟವೂ ತಪ್ಪಿದ್ದಲ್ಲ, ಇದರಿಂದ ಜೋಳದ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುವ ಸಾಧ್ಯತೆ ಹೆಚ್ಚು, ಜೋಳ ಬೆಳೆಯುವ ರೈತರಿಗೆ ಹಕ್ಕಿಗಳದ್ದು ಮತ್ತೊಂದು ರೀತಿಯ ಕಾಟ, ಹಿಂದಿನ ಕಾಲವೂ ಸೇರಿದಂತೆ ಇತ್ತೀಚೆಗೆ ಅಂದರೆ ಸುಮಾರು 10 ವರ್ಷಗಳ ಹಿಂದೆ ಇದ್ದ ಹಕ್ಕಿಗಳನ್ನು ಕಾಯುವ ಪದ್ಧತಿ ರೂಢಿಯಲ್ಲಿತ್ತು.
ಏನಿದು ಕವಣಿ ?ರೈತ ಕಷ್ಟಪಟ್ಟು ಬೆಳೆದ ಜೋಳವನ್ನು ತಿನ್ನಲು ಬೆಳಗ್ಗಿನ ಜಾವ ಹಾಗೂ ಸಾಯಂಕಾಲದ ಹೊತ್ತಿಗೆ ಹಕ್ಕಿಗಳು ತೋಟಕ್ಕೆ ದಾಂಗುಡಿ ಇಡುತ್ತಿದ್ದವು. ಇದರಿಂದ ಜೋಳದ ರಕ್ಷಣೆಗೆ ಆಗ ರೈತರು ಕವಣಿ (ದಾರದಲ್ಲಿ ಕಲ್ಲು ಹಾಕಿ ತಿರುಗಿಸಿ ಹಕ್ಕಿಗಳನ್ನು ಓಡಿಸುವುದು) ಕಲೆಯನ್ನು ಬಳಸಿಕೊಳ್ಳುತ್ತಿದ್ದರು. ಅಲ್ಲದೇ ಮತ್ತೊಂದು ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಹಕ್ಕಿಗಳನ್ನು ಬೆದರಿಸುವ ಲಡ್ ಆಡಿಸುವುದು (ಹಗ್ಗದಿಂದ ಗಣನೀಯ ಪ್ರಮಾಣದ ಶಬ್ದ ಮಾಡುವುದು) ಇದು ಕೇವಲ ಹಗ್ಗದಿಂದ ಹೊರಹೊಮ್ಮುವ ಪರಿಣಾಮಕಾರಿ ಶಬ್ಧವಾಗಿದೆ.
ಆಧುನಿಕತೆ ಬೆಳೆದರು ಪಾರಂಪರಿಕ ವಿಧಾನ ಬಿಡದ ಉತ್ತರ ಕರ್ನಾಟಕ ರೈತ (ETV Bharat) ಅಚ್ಚರಿಯೆಂದರೆ ಇದರ ಶಬ್ದದ ತೀವ್ರತೆ ಬಂದೂಕಿನಿಂದ ಹಾರುವ ಗುಂಡಿನಷ್ಟೇ ತೀವ್ರತೆ ಹೊಂದಿರುತ್ತದೆ. ಪಾತ್ರೆಯಿಂದ ಶಬ್ದ ಮಾಡುವುದು, ಪ್ಲಾಸ್ಟಿಕ್ ಡಬ್ಬಿಗಳನ್ನು ಬಾರಿಸುವುದು, ಹೂಯ್ ಹಾಯ್ ಎಂದು ಚೀರಾಡುವುದು ಸೇರಿದಂತೆ ಅನೇಕ ಕಲೆಗಳನ್ನು ಈಗಿನ ದಿನಗಳಲ್ಲಿ ಬೆರಳೆಣಿಕೆಯ ಜನರಷ್ಟೇ ಬಳಸುತ್ತಾರೆ. ಅಪರೂಪಕ್ಕೆ ಎಂಬಂತೆ ಈ ರೈತರು ಹಳೆ ಕಾಲದ ಪದ್ಧತಿಯನ್ನು ಅನುಸರಿ ನಿಸರ್ಗಕ್ಕೆ ಯಾವುದೇ ತರಹ ಹಾನಿಯಾಗದೆ, ತಮ್ಮ ಬೆಳೆಯನ್ನು ಉಳಿಸಿಕೊಳ್ಳೋಕೆ ನೈಸರ್ಗಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಗಮನವನ್ನು ಸೆಳೆದಿದ್ದಾರೆ.
ನಮ್ಮ ಮಕ್ಕಳಿಗೂ ಈ ಕಲೆ ಕಲಿಸುತ್ತೇನೆ :ಈಟಿವಿ ಭಾರತ ಜೊತೆ ಮಾತನಾಡಿದ ಮಹಾವೀರ ಪಡಸಲಗಿ, "ನಾನು ನಮ್ಮ ಮಕ್ಕಳಿಗೆ ಈ ರೀತಿಯ ಕಲೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಅವರು ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಕೇವಲ ಆಧುನಿಕತೆಯ ಬೆನ್ನಟ್ಟಿ ಹೋಗುತ್ತಿರುವ ಯುವ ಪೀಳಿಗೆಗೆ ಈ ರೀತಿಯ ಪ್ರಾಚೀನ ಕಲೆಗಳ ಮಾಹಿತಿ ಇರಬೇಕಾದದ್ದು ಅಗತ್ಯ. ಹಕ್ಕಿ ಕಾಯುವ ಪದ್ಧತಿಯನ್ನು ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಅದನ್ನೇ ನಾವು ಮುಂದುವರಿಸಿಕೊಂಡು ಬರುತ್ತಿದ್ದೇವೆ" ಎಂದು ಹೇಳಿದರು.
ಆಧುನಿಕತೆ ಬೆಳೆದರು ಪಾರಂಪರಿಕ ವಿಧಾನ ಬಿಡದ ಉತ್ತರ ಕರ್ನಾಟಕ ರೈತ (ETV Bharat) "ತಮಟೆ, ತಟ್ಟೆ ಬಾರಿಸುವುದು, ಪಟಾಕಿ ಸಿಡಿಸುವುದು, ಸುಮಾರು 300 ಅಡಿಯಷ್ಟು ಕಲ್ಲೆಸೆದರೆ ದೂರ ಸಾಗುವ ಕವಣಿ ಸೇರಿದಂತೆ ಹಲವು ಕಲೆಗಳ ಮೂಲಕ ಹಕ್ಕಿಗಳನ್ನು ಓಡಿಸುತ್ತೇವೆ. ಹಕ್ಕಿಗಳಿಂದ ನಾವು ಜೋಳವನ್ನು ರಕ್ಷಿಸಲು ಪ್ರತಿ ವರ್ಷ ಇದೇ ತಂತ್ರಗಾರಿಕೆ ಅನುಸರಿಸುತ್ತೇವೆ. ಜೋಳಕ್ಕೆ ಬೆಂಬಲ ಬೆಲೆ ಇಲ್ಲ. ಹಲವಾರು ಜನರು ಔಷಧಗಳನ್ನು ಉಪಯೋಗಿಸಿ ಹಕ್ಕಿಗಳ ಜೀವಕ್ಕೆ ಅಪಾಯ ತರುತ್ತಾರೆ. ಆದರೆ, ನಾವು ಕೇವಲ ಸಾಂಪ್ರದಾಯಿಕ ಕಲೆಗಳಿಂದಲೇ ಹಕ್ಕಿಗಳಿಂದ ಜೋಳ ರಕ್ಷಣೆ ಮಾಡುತ್ತೇವೆ. ಹಕ್ಕಿಗಳೂ ಸಹ ಜೀವಿಗಳೇ, ಅವು ನಮ್ಮ ಜಮೀನಿನಲ್ಲಿ ತಿನ್ನದೇ ಸರ್ಕಾರಕ್ಕೆ ಆಹಾರಕ್ಕಾಗಿ ಮೊರೆ ಇಡಕ್ಕಾಗುತ್ತದಾ?" ಎನ್ನುತ್ತಾರೆ ಮಹಾವೀರ.
ಇದನ್ನೂ ಓದಿ:ದೇಶಿ ಬೀಜಗಳ ಸಂರಕ್ಷಣೆಗೆ ಪಣ, 18 ತಳಿಗಳ ಜೋಳ ಬೆಳೆದ ರೈತ: ಇವರು ಜವಾರಿ ಜೋಳದ ಕಲ್ಲಪ್ಪಣ್ಣ ಅಂತಾನೇ ಫೇಮಸ್ಸು!!