ಸುಳ್ಯ(ದಕ್ಷಿಣ ಕನ್ನಡ):ಗೋವುಗಳ ಮೇಲೆ ವಿಶೇಷ ಕಾಳಜಿ ಹೊಂದಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸುಳ್ಯ ತಾಲೂಕಿನ ಮುರುಳ್ಯದಿಂದ ಮಲೆನಾಡು ಗಿಡ್ಡ ತಳಿಯ ಗೋವುಗಳನ್ನು ಬೆಂಗಳೂರಿಗೆ ಕರೆದೊಯ್ದರು.
ಮುರುಳ್ಯ ಗ್ರಾಮದ ಅಲೆಕ್ಕಾಡಿ ಸಮೀಪದ ಕೃಷಿಕ ಅಕ್ಷಯ್ ಆಳ್ವ ಅವರಿಂದ ಎರಡು ತಾಯಿ ಗೋವು ಮತ್ತು ಎರಡು ಕರುಗಳು ಸೇರಿ ನಾಲ್ಕು ಗೋವುಗಳನ್ನು ಬೆಂಗಳೂರಿನ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಅಕ್ಷಯ್ ಆಳ್ವ ಅವರು ಕೂಡ ಮಲೆನಾಡು ಗಿಡ್ಡ ತಳಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಆಸಕ್ತರಿಗೂ ಈ ತಳಿಯನ್ನು ನೀಡುತ್ತಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬೆಂಗಳೂರಿನ ಮನೆಗೆ ಸುಳ್ಯದಿಂದ ಹೊರಟ ಸುಳ್ಯದಿಂದ ಮಲೆನಾಡು ಗಿಡ್ಡ ತಳಿಯ ಹಸು ಹಾಗು ಕರು. (ETV Bharat) "ಮಲೆನಾಡು ಗಿಡ್ಡ ತಳಿಯ ದನವನ್ನು ಸ್ವತಃ ಶಾಲಿನಿ ರಜನೀಶ್ ಅವರೇ ಸಾಕುತ್ತಾರೆ ಎಂದು ತಿಳಿಸಿದ ಬಳಿಕವೇ ಅವರಿಗೆ ದನಗಳನ್ನು ನೀಡಿದ್ದೇವೆ. ಬಹಳ ಬೇಗನೇ ಭಾವನಾತ್ಮಕ ಸಂಬಂಧ ಹೊಂದುವ ಈ ತಳಿಯ ದನಗಳು ಇಲ್ಲಿಂದ ಬೀಳ್ಕೊಡುವಾಗ ಕಣ್ಣೀರಿಟ್ಟವು. ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಅಭಿಯಾನಕ್ಕೆ ಈ ಪ್ರಕ್ರಿಯೆ ಇನ್ನಷ್ಟು ಹುರುಪು ತುಂಬುವ ನಿರೀಕ್ಷೆ ನಮ್ಮದು" ಎಂದು ಅಕ್ಷಯ್ ಆಳ್ವ ಹೇಳಿದರು.
ಶಾಲಿನಿ ರಜನೀಶ್ ಅವರು ಮಲೆನಾಡು ಗಿಡ್ಡ ತಳಿಯ ಗೋವು ಸಾಕುವ ಆಸಕ್ತಿಯಿಂದ ಕಡಬ ತಾಲೂಕಿನಲ್ಲಿ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಯಿಲ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಪ್ರಸನ್ನ ಹೆಬ್ಬಾರ್ ಅವರ ಮೂಲಕ ಮಾಹಿತಿ ಪಡೆದು ಮುರುಳ್ಯದ ಅಕ್ಷಯ್ ಆಳ್ವರನ್ನು ಸಂಪರ್ಕಿಸಿದ್ದರು. ಅಕ್ಷಯ್ ಅವರಿಗೆ ತಮ್ಮ ಬೇಡಿಕೆಗಳನ್ನು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಲೆನಾಡು ಗಿಡ್ಡ ತಳಿಯ ನಾಲ್ಕು ಗೋವುಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬೆಂಗಳೂರಿನ ಮನೆ ಪ್ರವೇಶಿಸಿದ ಮಲೆನಾಡು ಗಿಡ್ಡ ತಳಿಯ ಗೋವು (ETV Bharat) ಅಕ್ಷಯ್ ಅವರಲ್ಲಿದ್ದ ಐದು ವರ್ಷದ ಹಂಸಿ ಎಂಬ ಹೆಸರಿನ ತಾಯಿ ಹಾಗೂ ಒಂದೂವರೆ ತಿಂಗಳಿನ ಕರು ಮತ್ತು ಈ ಹಿಂದೆ ಅಕ್ಷಯ್ ಅವರು ಸುಳ್ಯದ ಬಾಳುಗೋಡಿಗೆ ನೀಡಿದ್ದ ಸ್ವರ್ಣ ಕಪಿಲ ಎಂಬ ಹೆಸರಿನ ಎರಡೂವರೆ ವರ್ಷದ ತಾಯಿ ಹಾಗೂ ಎರಡೂವರೆ ತಿಂಗಳಿನ ಕರುವನ್ನು ಸುಳ್ಯದ ಮುರುಳ್ಯದಿಂದ ವಾಹನದ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ. ಪಶು ಸಂಗೋಪನೆ ಇಲಾಖೆಯ ನಿಯಮಾವಳಿಯಂತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಗೋವುಗಳನ್ನು ಬೆಂಗಳೂರಿಗೆ ಸಾಗಿಸಲಾಗಿದೆ.
ಇದನ್ನೂ ಓದಿ:ಶಾಲಿನಿ ರಜನೀಶ್ ರಾಜ್ಯದ ಮುಂದಿನ ಮುಖ್ಯ ಕಾರ್ಯದರ್ಶಿ: ಕರ್ನಾಟಕ ಸರ್ಕಾರದಿಂದ ನೇಮಕ ಆದೇಶ - SHALINI NEXT CS OF KARNATAKA