ಬೆಂಗಳೂರು: ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಚನ್ನಪಟ್ಟಣ ಟಿಕೆಟ್ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಪರಿಷತ್ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡುತ್ತಿದ್ದಂತೆ ಈ ಕುರಿತು ಜಾಲಹಳ್ಳಿ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್, ನಾಳೆ ದೆಹಲಿಗೆ ಹೋಗ್ತಿದ್ದೇನೆ. ಚನ್ನಪಟ್ಟಣ ಟಿಕೆಟ್ ಬಗ್ಗೆ ವರಿಷ್ಠರ ಜೊತೆ ಮಾತಾಡ್ತೇನೆ. ಈಗಾಗಲೇ ಸಾಕಷ್ಟು ಬಾರಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಾಗಿದೆ. ಈಗ ಮತ್ತೊಮ್ಮೆ ಚರ್ಚೆ ನಡೆಸಲಿದ್ದೇನೆ ಎಂದರು.
ಕುಮಾರಸ್ವಾಮಿ ಓಪನ್ ಮೈಂಡ್ನಲ್ಲಿ ಮಾತಾಡಿದ್ದಾರೆ. ಜೆಡಿಸ್ ಚಿಹ್ನೆ ಅಥವಾ ಬಿಜೆಪಿಯಿಂದ ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿ ಆಗಬೇಕು. ಇದಕ್ಕೆ ಕುಮಾರಸ್ವಾಮಿ ಅವರೂ ಒಪ್ಪಿಕೊಂಡಿದ್ದಾರೆ. ಬಿಜೆಪಿ ಜೆಡಿಎಸ್ನಿಂದ ಒಬ್ಬರೇ ಅಭ್ಯರ್ಥಿ ಸ್ಪರ್ಧಿಸುವುದು ಸ್ಪಷ್ಟ. ಯಾರೇ ಆದರೂ ಎನ್‌ಡಿಎ ಅಭ್ಯರ್ಥಿ ಸ್ಪರ್ಧಿಸ್ತಾರೆ. ಯೋಗೇಶ್ವರ್ ಸ್ವಲ್ಪ ಆತುರಪಟ್ಟು ರಾಜೀನಾಮೆಗೆ ಮುಂದಾಗಿರಬಹುದು. ಯೋಗೇಶ್ವರ್ ಜೊತೆಗೂ ಮಾತಾಡ್ತೇನೆ. ನನಗೆ ಬಂದ ಮಾಹಿತಿ ಪ್ರಕಾರ ನಿಖಿಲ್ ಅವರು ಸ್ಪರ್ಧೆ ಮಾಡ್ತಿಲ್ಲ, ಅವರಿಗೂ ಈಗ ಸ್ಪರ್ಧೆ ಬೇಕಾಗಿಲ್ಲ. ನಿಖಿಲ್ ಸ್ಪರ್ಧೆ ಮಾಡುವ ಹಾಗಿದ್ದರೆ ಈಗಾಗಲೇ ಟಿಕೆಟ್ ಅವರಿಗೇ ಘೋಷಣೆ ಆಗ್ತಿತ್ತು. ಟಿಕೆಟ್ ಗೊಂದಲದಿಂದ ಚನ್ನಪಟ್ಟಣ ಭಾಗದಲ್ಲಿ ಬಿಜೆಪಿ ಸಂಘಟನೆಗೆ ಧಕ್ಕೆ ಆಗಲ್ಲ ಎಂದರು.