ಬೆಂಗಳೂರು:ಚನ್ನಪಟ್ಟಣ ಟಿಕೆಟ್ ಕೈತಪ್ಪುವುದು ಖಚಿತವಾದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಸಿ.ಪಿ. ಯೋಗೇಶ್ವರ್ ಅವರು ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಬಾವುಟ ನೀಡಿ, ಶಾಲು ಹಾಕಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಯೋಗೇಶ್ವರ್ ಎರಡು ದಿನಗಳ ಹಿಂದಷ್ಟೇ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಸಿ.ಪಿ. ಯೋಗೇಶ್ವರ್, ಕೆಲವೊಂದು ಚರ್ಚೆ ನಡೆಸಿ ನಂತರ ಇಬ್ಬರು ಒಂದೇ ಕಾರಿನಲ್ಲಿ ಸಿಎಂ ನಿವಾಸಕ್ಕೆ ಆಗಮಿಸಿದ್ದರು. ಸಿಎಂ ನಿವಾಸ ಕಾವೇರಿಯಿಂದ ನೇರವಾಗಿ ಒಂದೇ ಕಾರಿನಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದರು. ಆ ಬಳಿಕ ಪಕ್ಷ ಸೇರ್ಪಡೆಗೊಂಡರು.
ಯೋಗೇಶ್ವರ್ ಸ್ಪಷ್ಟನೆ:ಪಕ್ಷ ಸೇರ್ಪಡೆ ಬಳಿಕ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿ ಯೋಗೇಶ್ವರ್, ಕಾಂಗ್ರೆಸ್ ಸೇರ್ಪಡೆಯಾಗಲು ಯಾವುದೇ ಷರತ್ತು ಹಾಕಿಲ್ಲ. ಯಾವುದೇ ಷರತ್ತು ಹಾಕದೇ ಕಾಂಗ್ರೆಸ್ ಸೇರಿದ್ದೇನೆ ಎಂದರು.
ನನ್ನ ರಾಜಕೀಯ ಜೀವನವನ್ನು ಕಾಂಗ್ರೆಸ್ನಿಂದಲೇ ಪ್ರಾರಂಭ ಮಾಡಿದ್ದು, ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಕೆಲ ಸಂದರ್ಭದಲ್ಲಿ ನಾವು ಕಟ್ಟಿದ ಮನೆಗಳಲ್ಲಿ ನಾವು ಇರಲು ಆಗಲ್ಲ. ಸ್ವಯಂ ಪ್ರೇರಿತವಾಗಿ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇನೆ. ಮೈತ್ರಿ ಬಳಿಕ ರಾಜ್ಯ ರಾಜಕೀಯ ಸನ್ನಿವೇಶ ಬದಲಾಯಿತು. ನನ್ನ ಬೆಳವಣಿಗೆಗೆ ಪೂರಕ ವಾತಾವರಣ ಇರಲಿಲ್ಲ. ಹಾಗಾಗಿ ಚನ್ನಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ, ಜನಸಾಮಾನ್ಯರಿಗೆ ಅನುಕೂಲ ಮಾಡಲು ಕಾಂಗ್ರೆಸ್ ಕೈ ಹಿಡಿದಿದ್ದೇನೆ. ಕಾಂಗ್ರೆಸ್ ಬೆಳೆಸೋಣ ಮತ್ತು ಜಿಲ್ಲೆ ಅಭಿವೃದ್ಧಿ ಮಾಡೋಣ ಎಂದು ಯೋಗೇಶ್ವರ್ ಹೇಳಿದರು.
ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಸಿಪಿ ಯೋಗೇಶ್ವರ್ (ETV Bharat) ಡಿಕೆಶಿ ಹೇಳಿದ್ದಿಷ್ಟು:ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿ.ಪಿ. ಯೋಗೇಶ್ವರ್ ಇಂದು ಬೆಳಗ್ಗೆ ನನ್ನನ್ನು ಭೇಟಿ ಮಾಡಿ ಅನೇಕ ವಿಷಯಗಳನ್ನು ಚರ್ಚೆ ಮಾಡಿದರು. ಯಾವುದೇ ಕಂಡೀಶನ್ ಇಲ್ಲದೆ, ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಕೂಡ ಪಡೆದಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಎಸ್ಪಿ ಸೇರಿ ಎಲ್ಲಾ ಪಕ್ಷ ನೋಡಿದ್ದಾರೆ. ಆದರೆ, ಅವರು ರಾಜಕಾರಣ ಆರಂಭ ಮಾಡಿದ್ದೆ ಕಾಂಗ್ರೆಸ್ ಪಕ್ಷದಿಂದ. ಮತ್ತೆ ಮರಳಿ ಗೂಡಿಗೆ ಯೋಗೇಶ್ವರ್ ಬಂದಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ ಎಂದರು.
ಈ ವೇಳೆ ಹಾಜರಿದ್ದ ಸಚಿವರಾದ ಜಮೀರ್ ಅಹಮದ್ ಖಾನ್, ಡಾ.ಎಂ.ಸಿ.ಸುಧಾಕರ್, ಎನ್.ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಸಿಪಿ ಯೋಗೇಶ್ವರ್ (ETV Bharat) ಬಿಜೆಪಿಗೆ ರಾಜೀನಾಮೆ:ಪಕ್ಷ ಸೇರ್ಪಡೆಗೂ ಮುನ್ನ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಪತ್ರದ ಮೂಲಕ ರಾಜೀನಾಮೆಯನ್ನು ಯೋಗೇಶ್ವರ್ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ಈ ದಿನ ರಾಜೀನಾಮೆ ಸಲ್ಲಿಸುತ್ತಿದ್ದು, ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ, ಇಲ್ಲಿಯವರೆಗೂ ತಾವು ನನಗೆ ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸತತವಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದ ಯೋಗೇಶ್ವರ್, ರಾಜ್ಯ ನಾಯಕರನ್ನೂ ಕರೆದೊಯ್ದು ಟಿಕೆಟ್ಗಾಗಿ ಲಾಭಿ ನಡೆಸಿದ್ದರು. ಕಡೆ ಕ್ಷಣದ ಪ್ರಯತ್ನ ವಿಫಲವಾಗಿ ಎನ್ಡಿಎ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿಗೆ ನೀಡುವ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದ ಹಿನ್ನೆಲೆ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ರಾಜಕೀಯ ಶಕ್ತಿ:ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ತನ್ನದೇ ಕೊಡುಗೆ ನೀಡಿರುವ ರಾಮನಗರ ಜಿಲ್ಲೆಯಲ್ಲಿ ಒಕ್ಕಲಿಗ ನಾಯಕತ್ವಕ್ಕೆ ಹೆಚ್ಚು ಪ್ರಾಬಲ್ಯ ಇದೆ. ಜಿಲ್ಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶರ್ ಅವರು ತಮ್ಮದೇ ಪ್ರತಿಷ್ಠೆಯ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಒಬ್ಬರನ್ನೊಬ್ಬರು ವಿರೋಧ ಮಾಡಿದರೂ ಸಹ ತಮ್ಮದೇ ರಾಜಕೀಯ ಶಕ್ತಿಯನ್ನು ಹೊಂದಿದ್ದು, ಯಾರ ಮುಂದೆಯೂ ಕೈಕಟ್ಟಿ ನಿಲ್ಲದೆ ಏನಯ್ಯ, ಏನಣ್ಣ, ಬಾರಣ್ಣ ಎಂದು ಮಾತನಾಡುವಷ್ಟು ಸಲುಗೆ ಹೊಂದಿದ್ದಾರೆ. ಅಲ್ಲದೆ ಸಿಪಿವೈ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೂ ಸಹ ಅಲ್ಲಿ ಡಿಕೆಶಿ ಸಮಾನ ನಾಯಕರು ಎಂದೇ ಗುರುತಿಸಿಕೊಂಡಿದ್ದಾರೆ.
ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಸಿಪಿ ಯೋಗೇಶ್ವರ್ (ETV Bharat) ಟಾಪ್ 10 ನಾಯಕರಲ್ಲಿ ಸ್ಥಾನ:1999 ರಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದ ಸಿ.ಪಿ.ಯೋಗೇಶ್ವರ್ ಅವರು 2009ರ ವರೆಗೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಆದರೆ, ಬಳಿಕ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸಿ ಎಂಸಿ ಅಶ್ವತ್ಥ್ ಅವರ ವಿರುದ್ಧ ಪರಾಜಿತರಾದರು. ಬಳಿಕ ಎಂಸಿ ಅಶ್ವತ್ಥ್ ಅವರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಗೆದ್ದು ಸಚಿವರು ಆದರು. ಬಳಿಕ ಮತ್ತೆ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಜ್ಜಾಗಿದ್ದರು. ಆದರೆ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಿಗದ ಕಾರಣ ಸಮಾಜವಾದಿ ಪಕ್ಷದ ಮೂಲಕ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾದರು. ಬಳಿಕ ಮತ್ತೆ ಕಾಂಗ್ರೆಸ್‍ಗೆ ಬೆಂಬಲ ನೀಡಿದ ಅವರು ನೀರಾವರಿ ಯೋಜನೆಗಳನ್ನು ಪೂರ್ಣ ಮಾಡಿ ಮತ್ತೆ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿ 2017ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ನಿಟ್ಟಿನಲ್ಲಿ ಅಂದಿನಿಂದ ಬಿಜೆಪಿ ಪಕ್ಷದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಎರಡು ಚುನಾವಣೆಯನ್ನು ಎದುರಿಸಿ ಪರಾಜಿತರಾದ ಯೋಗೇಶ್ವರ್, ರಾಜ್ಯ ಬಿಜೆಪಿ ಪಕ್ಷದಲ್ಲಿ ಸೀನಿಯಾರಿಟಿ ಟಾಪ್ 10 ನಾಯಕರಲ್ಲಿ ಸ್ಥಾನ ಪಡೆದಿದ್ದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಸಿ.ಪಿ.ಯೋಗೇಶ್ವರ್: ಬಿಜೆಪಿಗೆ ರಾಜೀನಾಮೆ