ಕರ್ನಾಟಕ

karnataka

ETV Bharat / state

ರಂಗೇರಿದ ಚನ್ನಪಟ್ಟಣ ಉಪಚುನಾವಣೆ: ಎನ್​ಡಿಎ, ಕಾಂಗ್ರೆಸ್ ಬಿರುಸಿನ ಪ್ರಚಾರ; ನಿಖಿಲ್‌ ಪರ ಪತ್ನಿಯಿಂದ ಮತಬೇಟೆ - CHANNAPATNA BYELECTION

ಚನ್ನಪಟ್ಟಣ ಉಪಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಮತಯಾಚನೆಗೆ ಇಳಿದಿದ್ದು ಕ್ಷೇತ್ರ ಕುತೂಹಲ ಸೃಷ್ಟಿಸಿದೆ.

CHANNAPATNA BYELECTION 2024
ಚನ್ನಪಟ್ಟಣ ಉಪ ಚುನಾವಣೆ (ETV Bharat)

By ETV Bharat Karnataka Team

Published : Nov 5, 2024, 8:00 AM IST

Updated : Nov 5, 2024, 8:33 AM IST

ರಾಮನಗರ:ಬೊಂಬೆನಗರಿ ಚನ್ನಪಟ್ಟಣ ಉಪಚುನಾವಣೆ ರಂಗೇರಿದೆ. ಎನ್​ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಮುಖ ನಾಯಕರು ಸೋಮವಾರ ಹಲವೆಡೆ ಭರ್ಜರಿ ಪ್ರಚಾರ ನಡೆಸಿ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಹಾಗೂ ಕೇಂದ್ರ ಸಚಿವ ಸೋಮಣ್ಣ ಪ್ರಚಾರ ನಡೆಸಿದರು.

"ಚದುರಂಗ ಆಡಿದವರೆಲ್ಲಾ ಮುಳುಗಿ ಹೋಗಿದ್ದಾರೆ. ಜನರಿಗೆ ಏನು ಲಾಭವಾಗಿದೆ?, ಯಾರ್ಯಾರು ಏನೇನು ಕೆಲಸ ಮಾಡಿದ್ದಾರೆ? ಎನ್ನುವುದರ ಆಧಾರದ ಮೇಲೆ ಜನ ಈ ಬಾರಿಯ ಚುನಾವಣೆ ತೀರ್ಮಾನ ಮಾಡಲಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯನ್ನು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರ (ETV Bharat)

"ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿ.ಪಿ.ಯೋಗೇಶ್ವರ್ ಹಾಗೂ ಹೆಚ್​.ಡಿ.ಕುಮಾರಸ್ವಾಮಿ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದನ್ನು ಜನರು ಪಟ್ಟಿ ಮಾಡುತ್ತಾರೆ. ಅದಕ್ಕೆ ಅವರೇ ಅಂಕ ನೀಡುತ್ತಾರೆ. ಇದರ ಹೊರತಾಗಿ ಯಾವ ರಣರಂಗವೂ ಇಲ್ಲ, ಯಾವುದೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಾದವನು ತನ್ನ ಜನರಿಗೆ ಯಾವ ರೀತಿ ಸಹಾಯ ಮಾಡುತ್ತಾನೆ, ಏನು ಅನುಕೂಲ ಕಲ್ಪಿಸಿ ಕೊಡುತ್ತಾನೆ, ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಎನ್ನುವುದು ಮುಖ್ಯ" ಎಂದು ಹೇಳಿದರು.

ಜಯನಗರ ಕ್ಷೇತ್ರ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಕೆಲವು ಸೆಲೆಬ್ರಿಟಿಗಳು ಆಗ್ರಹಿಸುತ್ತಿರುವುದರ ಕುರಿತು ಮಾತನಾಡಿದ ಅವರು, "ಈ ವಿಚಾರ ನನಗೆ ಗೊತ್ತಿದೆ. ಈಗಾಗಲೇ ನಾನು 40 ಕೋಟಿ ರೂ ಅನುದಾನ ಕೊಟ್ಟಿದ್ದೇನೆ. ಆ ಕ್ಷೇತ್ರದ ಶಾಸಕರು ಭಾನುವಾರ ನನ್ನನ್ನು ಭೇಟಿ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಉತ್ತರ ಹೇಳಿದ್ದೇನೆ. ಕ್ಷೇತ್ರಕ್ಕೆ ಭೇಟಿ ಕೊಟ್ಟ ನಂತರ ಮುಂದಿನ ವಿಚಾರ ಹೇಳುತ್ತೇನೆ" ಎಂದರು.

ಬಿಜೆಪಿ ನಾಯಕರು ವಕ್ಫ್ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಪ್ರತಿಕ್ರಿಯಿಸಿ, "ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ, ರಾಜಕೀಯ ಮಾಡುತ್ತಿದ್ದಾರೆ" ಎಂದರು.

ಕುಮಾರಸ್ವಾಮಿ ಸಹವಾಸ ಸಾಕಾಗಿದೆ:"18 ಸೀಟು ಇಟ್ಟುಕೊಂಡು ಸರ್ಕಾರ ಮಾಡಲು ಸಾಧ್ಯವೇ? ಬಿಜೆಪಿಯವರು ದಡ್ಡರು. ಕೇವಲ ಎರಡು ಕ್ಷೇತ್ರ ಗೆದ್ದಿರುವುದಕ್ಕೆ ಕೇಂದ್ರದಲ್ಲಿ ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈ ಹಿಂದೆ ಅವರ ಸಹವಾಸ ಮಾಡಿ ಅನುಭವಿಸಿದ್ದು ಸಾಕಾಗಿದೆ. ಚುನಾವಣೆ ಸಮೀಪಿಸಲಿ, ಆಗ ಆ ಬಗ್ಗೆ ಮಾತನಾಡುತ್ತೇನೆ" ಎಂದು ಹೇಳಿದರು.

"ರಾಮನಗರದಿಂದ ಕುಮಾರಸ್ವಾಮಿ ಶಾಸಕರು, ಮುಖ್ಯಮಂತ್ರಿ, ಸಂಸದರಾಗಿದ್ದರು. ಅವರ ತಂದೆ ಅದೇ ಕ್ಷೇತ್ರದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದರು. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ನಿಖಿಲ್ ಏಕೆ ಸೋಲುತ್ತಿದ್ದರು? ಇನ್ನೆಷ್ಟು ದಿನ ಈ ರಾಮನಗರ ಹಾಗೂ ಚನ್ನಪಟ್ಟಣ ಜನರಿಗೆ ಟೋಪಿ ಹಾಕಲು ಸಾಧ್ಯ ಎಂದು ಕುಮಾರಸ್ವಾಮಿ ಅವರು ಈಗ ಮಂಡ್ಯಕ್ಕೆ ಹೋಗಿದ್ದಾರೆ. ನೀವು ಮಂಡ್ಯಕ್ಕೆ ಹೋಗಿ. ನಮ್ಮ ಅಭ್ಯಂತರವಿಲ್ಲ. ಚನ್ನಪಟ್ಟಣದ ಜನರ ಕಾಳಜಿ ನಾವು ಮಾಡುತ್ತೇವೆ" ಎಂದರು.

ಕುಮಾರಸ್ವಾಮಿ ದುಡ್ಡು ಬೇಡ ಎನ್ನಬೇಡಿ:"ಕೇವಲ ಯೋಗೇಶ್ವರ್ ಒಬ್ಬರೇ ಈ ಕ್ಷೇತ್ರದ ಜನರ ಸೇವೆ ಮಾಡುವುದಿಲ್ಲ. ನಾನು, ಸಿದ್ದರಾಮಯ್ಯ ಸೇರಿ ಎಲ್ಲಾ ಸಚಿವರು ಹಾಗೂ ಮುಖಂಡರು ನಿಮ್ಮ ಸೇವೆ ಮಾಡುತ್ತೇವೆ. ಕುಮಾರಸ್ವಾಮಿ ದುಡ್ಡು ಕೊಡುತ್ತಾರಂತೆ. ಅವರ ದುಡ್ಡನ್ನು ನೀವು ಬೇಡ ಎನ್ನಬೇಡಿ. ಅವರ ಬಳಿ ಹಣ ಪಡೆಯಿರಿ, ಮತವನ್ನು ಹಸ್ತದ ಗುರುತಿಗೆ ಹಾಕಿ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈ ಗುರುತಿಗೆ ನಿಮ್ಮ ಬೆಂಬಲ ನೀಡಿ" ಎಂದರು.

"ಚನ್ನಪಟ್ಟಣ ಕ್ಷೇತ್ರದ ಚುನಾವಣೆಯನ್ನು ನಾವು ಯಾರೂ ಬಯಸಿರಲಿಲ್ಲ. ಕುಮಾರಸ್ವಾಮಿ ನನಗೆ ವಿಶ್ವಾಸದ್ರೋಹ ಮಾಡಿದರು. ಚನ್ನಪಟ್ಟಣ ಬೇಡವೆಂದು ಹೇಳದೆ, ಕೇಳದೆ ಮಂಡ್ಯಕ್ಕೆ ಹೋದ ಕಾರಣಕ್ಕೆ ನಾನು ಇಂದು ನಿಮ್ಮ ಮುಂದೆ ಅಭ್ಯರ್ಥಿಯಾಗಿ ನಿಂತಿದ್ದೇನೆ" ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದರು.

ನಿಖಿಲ್ ಪರ ಪತ್ನಿ ರೇವತಿ ಪ್ರಚಾರ (ETV Bharat)

ನಿಖಿಲ್ ಪರ ಪತ್ನಿ ರೇವತಿ ಪ್ರಚಾರ:ಮತ್ತೊಂದೆಡೆ, ಚನ್ನಪಟ್ಟಣ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ನಿಖಿಲ್ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಮತಪ್ರಚಾರ ನಡೆಸಿದರು‌. ಚನ್ನಪಟ್ಟಣದ ಪಾಲಿಟೆಕ್ನಿಕ್ ಕಾಲೇಜ್ ಬಳಿ, ಬಸ್ ನಿಲ್ದಾಣ ಹಾಗೂ ಪದವಿ ಕಾಲೇಜಿನ ಸಮೀಪ ವಿದ್ಯಾರ್ಥಿನಿಯರ ಬಳಿ ಪತಿಯ ಪರವಾಗಿ ಮತ ಕೇಳಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾಗಿ ಕರಪತ್ರಗಳನ್ನು ನೀಡಿ ಎನ್​​ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು. ನಿಖಿಲ್ ಕುಮಾರಸ್ವಾಮಿ ಗ್ರಾಮೀಣ ಭಾಗದಲ್ಲಿ‌ ಪ್ರಚಾರ ನಡೆಸಿದರು.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರ

Last Updated : Nov 5, 2024, 8:33 AM IST

ABOUT THE AUTHOR

...view details