ಚಾಮರಾಜನಗರ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ ಅವರು ಚಾಮರಾಜನಗರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಒತ್ತುವರಿ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು. ಕೆರೆ ಪರಿಶೀಲನೆಗೆ ಸಾಗುವಾಗ ಚಾಮರಾಜನಗರ ತಾಲೂಕಿನ ಪುಟ್ಟನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಭೇಟಿ ಕೊಟ್ಟರು. ಶಾಲಾ ಮಕ್ಕಳೊಂದಿಗೆ ಮಾತನಾಡಿದ ಡಿಸಿ, ಕಲಿಕೆ ಪ್ರಗತಿ ವೀಕ್ಷಿಸಿದರು. ಇದೇ ವೇಳೆ ವಿದ್ಯಾರ್ಥಿನಿಗೆ ಗಣಿತ ಪಾಠವನ್ನು ಪ್ರೀತಿಯಿಂದ ಹೇಳಿಕೊಟ್ಟರು. ನಂತರ ಬಿಸಿಯೂಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು.
ತಾಲೂಕಿನ ಕೋಡಿಮೋಳೆ ಕೆರೆ, ನಾಗವಳ್ಳಿ ಕೆರೆ, ಜ್ಯೋತಿಗೌಡನಪುರ ಕೆರೆ, ಕಾಗಲವಾಡಿ ಕೆರೆ, ಹೊಂಗನೂರು ಕೆರೆ, ಹೊಂಡರಬಾಳು ಕೆರೆ, ಇನ್ನಿತರ ಕೆರೆಗಳನ್ನು ವೀಕ್ಷಿಸಿದರು. ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆಗಳ ವಿಸ್ತೀರ್ಣ, ಒತ್ತುವರಿಯಾಗಿರುವ ಭಾಗಗಳು, ಕೆರೆಗಳ ಅಭಿವೃದ್ಧಿ ಕುರಿತ ಮಾಹಿತಿಯನ್ನು ಅಧಿಕಾರಿಗಳಿಂದ ಆಯಾ ಸ್ಥಳದಲ್ಲಿಯೇ ಪಡೆದು ಪರಿಶೀಲಿಸಿದರು.
"ಕೆರೆಗಳಿಗೆ ಹದ್ದುಬಸ್ತು ಮಾಡಿ, ಒತ್ತುವರಿ ತೆರವುಗೊಳಿಸಿ. ಕೆಲವೆಡೆ ಕೆರೆಗಳಿಗೆ ಬಿಟ್ಟಿರುವ ಕಲುಷಿತ ನೀರು ಸೇರದಂತೆ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ತ್ಯಾಜ್ಯ ವಸ್ತುಗಳನ್ನು ಕೆರೆಯ ಬಳಿ ಹಾಕುವುದನ್ನು ತಡೆಗಟ್ಟಬೇಕು. ಕೆರೆಯ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡಬೇಕು" ಎಂದು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.