ಮಂಡ್ಯ:ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ದು ಯಾರು?. ಜನತಾದಳ ಸರ್ಕಾರವೇ ಅಲ್ವಾ?. ಕುಮಾರಸ್ವಾಮಿ ಸರ್ಕಾರದಲ್ಲೇ ಪೋನ್ ಟ್ಯಾಪ್ ಆಯ್ತು. ಧರ್ಮಪೀಠಕ್ಕೆ ಇದಕ್ಕಿಂತ ಅಗೌರವ ಬೇಕಾ? ಎಂದು ಸಚಿವ ಚಲುವರಾಯಸ್ವಾಮಿ ದೂರಿದರು.
ನಾಗಮಂಗಲದಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ನಿಂದ ಬಹಳಷ್ಟು ಜನ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪರ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ರೈತ ವಿರೋಧಿ ನೀತಿ ಅನುಸರಿಸುವ ಮೈತ್ರಿಗೆ ಜನರೇ ಮತ ನೀಡಲ್ಲ ಅಂತಿದ್ದಾರೆ. ಮಂಡ್ಯದಲ್ಲಿ ನಿರೀಕ್ಷೆಗೂ ಮೀರಿ ಸ್ಟಾರ್ ಚಂದ್ರುಗೆ ಜನರ ಬೆಂಬಲ ಸಿಗ್ತಿದೆ ಎಂದರು.
ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ನಾಯಕರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವ ವಿಚಾರವಾಗಿ ಮಾತನಾಡಿ, ನಾವು ಮೈತ್ರಿ ನಾಯಕರಿಗಿಂತ ಮೊದಲೇ ಚುಂಚನಗಿರಿಶ್ರೀ ಭೇಟಿ ಮಾಡಿದ್ದೇವೆ. ಕಾಂಗ್ರೆಸ್ ನಿಯೋಗ ಕೂಡ ಶ್ರೀಗಳನ್ನು ಭೇಟಿ ಮಾಡಿತ್ತು. ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅನೇಕ ಸಾರಿ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಶ್ರೀಗಳು ದೇವರು ಒಳ್ಳೆದಾಗ್ಲಿ ಅಂತಾ ಹೇಳ್ತಾರೆ. ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವುದು ಸರ್ವೇ ಸಾಮಾನ್ಯ ಎಂದರು.
ಕುಮಾರಸ್ವಾಮಿಯವರು ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿರುವ ವಿಚಾರವಾಗಿ, ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ನಾಲ್ಕೈದು ತಿಂಗಳಾಗಿದೆ. ಆದರೆ 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಎಸ್.ಎಂ.ಕೃಷ್ಣ ಅಂದು ಜೆಡಿಎಸ್ಗೆ ಮತ್ತೊಂದು ಅವಕಾಶ ಕೊಡಿ ಎಂದರು. ಅಂದು ಜೆಡಿಎಸ್ನಲ್ಲಿ ನಾನೂ ಇದ್ದೆ. ಅಂದು ಏನಾಯ್ತು?. ನಾನು ಈಗ ಅದನ್ನು ಹೇಳಿದ್ರೆ ಚೆನ್ನಾಗಿರಲ್ಲ. ಅಂದು ಈ ಜಿಲ್ಲೆಯ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರನ್ನು ಮತ್ತೊಮ್ಮೆ ಸಿಎಂ ಮಾಡುವ ಅವಕಾಶ ದೇವೇಗೌಡರಿಗೆ, ಜೆಡಿಎಸ್ಗೆ ಇತ್ತು. ಈಗ ಅವರ ಮನೆಗೆ ಹೋಗ್ತೀರಲ್ಲ, ಅವರು ಏನ್ ಮಾಡಬೇಕು ಎಂದರು.
ಇದನ್ನೂ ಓದಿ:ಚಲುವರಾಯಸ್ವಾಮಿ ವಿರುದ್ಧ ಮಾನಹಾನಿಕರ ಹೇಳಿಕೆ ಆರೋಪ: ಸುರೇಶ್ ಗೌಡ ವಿರುದ್ಧ ವಿಚಾರಣೆಗೆ ನ್ಯಾಯಾಲಯ ಸೂಚನೆ - Civil Court