ಬೆಂಗಳೂರು: ಮೈಸೂರು ಮುಡಾ ದಾಖಲೆಗಳನ್ನು ಕಾರು ಮತ್ತು ಹೆಲಿಕಾಪ್ಟರ್ನಲ್ಲಿ ತಂದ ಸಚಿವ ಬೈರತಿ ಸುರೇಶ್ ನಿಜವಾದ ಕಳ್ಳ. ನಾನು ಕಳ್ಳನಲ್ಲ. ಕಾಂಗ್ರೆಸ್‍ನವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೈಟ್ನರ್ ಹಾಕಿದ್ದು ಯಾರು? ನೀವೇ ಆ ಇಲಾಖೆಗೆ ಸಚಿವರು, ಇ.ಡಿ. ಕೇಳಿದ ತಕ್ಷಣ ನೀವು ದಾಖಲೆ ಕೊಡಬೇಕಿತ್ತು. 3 ಸಾರಿ ನೋಟಿಸ್ ಬಂದರೂ ಯಾಕೆ ದಾಖಲೆ ಕೊಟ್ಟಿಲ್ಲ? ಅಲ್ಲಿಗೆ ಕದ್ದು ಓಡಾಡುವವರು ನೀವಾ ನಾವಾ ಎಂದು ಪ್ರಶ್ನಿಸಿದರು.
ಸಚಿವ ಬೈರತಿ ಸುರೇಶ್ ಅವರೇ ಮುಖ್ಯಮಂತ್ರಿಗಳನ್ನೂ ಸಿಕ್ಕಿಹಾಕಿಸಿದ್ದಾರೆ. ಮುಖ್ಯಮಂತ್ರಿಗಳ ಮಾನಸಪುತ್ರ ಸುರೇಶ್ ಅವರು ಕುಮಾರಸ್ವಾಮಿ ಅವರ ಬಳಿ ಕಡತ ಇರಬಹುದು ಎಂದು ಹೇಳಿದ್ದಾರೆ. ಹಾಗಿದ್ದರೆ ಅವರೇನು ಸಂಬಂಧಿಸಿದ ಇಲಾಖೆ ಸಚಿವರೇ? ಅವರ ಹತ್ತಿರ ಯಾಕೆ ಇರುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಕೇಳಿದರು.
ಛಲವಾದಿ ನಾರಾಯಣಸ್ವಾಮಿ ಫೈಲ್ ಕದ್ದುಕೊಂಡು ಹೋಗಿರಬೇಕು ಎಂದಿದ್ದಾರೆ. ಮಿಸ್ಟರ್ ಸುರೇಶ್ ಅವರೇ, ನೀವು ಸಚಿವರಾಗಲೂ ಯೋಗ್ಯರಲ್ಲ. ನಾನೇನಾದರೂ ಕದ್ದುಕೊಂಡು ಹೋಗಿದ್ದರೆ ದೂರು ನೀಡಬೇಕಿತ್ತಲ್ಲವೇ? ನಾಲಿಗೆ ಹೇಗಾದರೂ ಹೋಗುತ್ತದೆಂದು ಹೇಳಿಕೆ ಕೊಡುವುದನ್ನು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.
ಸಂದರ್ಭ ಬಂದಾಗ ನಮ್ಮ ಜನಾಂಗದಿಂದ ಉತ್ತರ:ತಾವೊಬ್ಬ ಸಚಿವರು; ನಿಮ್ಮ ಬಗ್ಗೆ ಗೌರವ ಇದೆ. ಆದರೆ, ನಿಮ್ಮ ಮಾತುಗಳ ಬಗ್ಗೆ ಗೌರವ ಇಲ್ಲ. ನೀವು ನನ್ನನ್ನು ಕಳ್ಳನನ್ನಾಗಿ ಮಾಡಿದ್ದೀರಿ. ಕುಮಾರಸ್ವಾಮಿಯವರ ವಿಚಾರ ಬಂದಾಗ ಅವರ ಮನೆಯಲ್ಲಿ ಇರಬಹುದು ಎಂದಿದ್ದೀರಿ. ಅವರನ್ನು ಕಳ್ಳ ಎಂದೇಕೆ ಹೇಳಿಲ್ಲ? ಅವರು ತಿರುಗಿಸಿ ನಿಮಗೆ ಉತ್ತರ ಕೊಡುತ್ತಾರೆಂದು ಅಲ್ಲವೇ? ನಾನು ದಲಿತ ಸಮುದಾಯದವನಾದ ಕಾರಣ ಏನೂ ಮಾಡಲಾರರು ಎಂಬ ಭಾವನೆ ನಿಮ್ಮದು ಎಂದು ಆಕ್ಷೇಪಿಸಿದರು.
ನಾವು ಶಕ್ತಿಶಾಲಿಗಳಲ್ಲದ ಕಾರಣ ನೇರಾನೇರವಾಗಿ ಮೇಲೆ ಬೀಳುವುದಿಲ್ಲ; ಆದರೆ, ಸಂದರ್ಭ ಬಂದಾಗ ನಮ್ಮ ಜನಾಂಗಕ್ಕೆ ಉತ್ತರಿಸಲು ಸಾಧ್ಯ ಇದೆ. ತಪ್ಪು ಮಾಡಿದ ನೀವು ಕಳ್ಳ ಎಂದು ಟೀಕಿಸಿದರು.
ನಾರಾಯಣಸ್ವಾಮಿ ಬಿರಿಯಾನಿ ಅಂಗಡಿ ಇಟ್ಟುಕೊಂಡಿದ್ದಾನೆ ಎನ್ನುತ್ತೀರಿ. ಹಾರಿಕೆ ಉತ್ತರ ಕೊಡುವುದು, ಸಂಬಂಧವಿಲ್ಲದ ಪ್ರಶ್ನೆ ಕೇಳುವುದು, ಆಪಾದನೆ ಮಾಡುವುದು ಕಾಂಗ್ರೆಸ್ಸಿನವರ ಚಟ. ಹೇಳಿ ಕೇಳಿ ಛಲವಾದಿ ಇದ್ದೇನೆ. ನನ್ನನ್ನು ಕೆಣಕಿದರೆ ಸುಮ್ಮನಿರೋದಿಲ್ಲ ಎಂದು ಸವಾಲು ಹಾಕಿದರು.
ಜಗ್ಗೋದು ಇಲ್ಲ, ಬಗ್ಗೋದು ಇಲ್ಲ ಎಂದ ನೀವು ಸೈಟ್‍ಗಳನ್ನು ಯಾಕೆ ವಾಪಸ್ ಕೊಟ್ಟಿದ್ದೀರಿ? 5 ಎಕರೆ ಭೂಮಿ ರಾತ್ರೋರಾತ್ರಿ ವಾಪಸ್ ಮಾಡಿದ್ದು ಯಾಕೆ? ನಾವು ಬಿಜೆಪಿಯವರು ಹೋರಾಟ ಮಾಡುತ್ತೇವೆ. ನೀವು ಜಗ್ಗಲೂ ಬೇಕು; ಬಗ್ಗಲೂ ಬೇಕು ಎಂದು ಪ್ರಿಯಾಂಕ್ ಖರ್ಗೆಯವರ ಮಾತಿಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು ಕೊಟ್ಟರು.
ಇದನ್ನೂ ಓದಿ: ಜೆಡಿಎಸ್ ಚನ್ನಪಟ್ಟಣ ಸೀಟು ಬಿಟ್ಟು ಕೊಡ್ತಾರಂತೆ, ಇಷ್ಟು ವೀಕ್ ಆಗ್ತಾರೆ ಅಂತ ತಿಳಿದುಕೊಂಡಿರಲಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್