ಬೆಂಗಳೂರು :ವಿಧಾನಮಂಡಲ ಅಧಿವೇಶನಕ್ಕೆ ಶಾಸಕರ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪೀಕರ್ ಹೊಸ ಹೊಸ ಪ್ರಯೋಗಗಳ ಮೊರೆ ಹೋಗುತ್ತಿದ್ದಾರೆ. ಅದರ ಭಾಗವಾಗಿ ಶಾಸಕರಿಗೆ ಉಚಿತ ರುಚಿಕರ ಉಪಹಾರ, ಮಧ್ಯಾಹ್ನದ ಊಟವನ್ನು ಈಗಾಗಲೇ ವ್ಯವಸ್ಥೆ ಮಾಡಿದ್ದಾರೆ. ಅದರ ಜೊತೆಗೆ ಶಾಸಕರಿಗೆ ಮಧ್ಯಾಹ್ನದ ಕಿರು ನಿದ್ರೆಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ವಿಶೇಷ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು. ಟಿ ಖಾದರ್ ನಾನಾ ಕಸರತ್ತು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಅಧಿವೇಶನಕ್ಕೆ ಶಾಸಕರು ಗೈರಾಗುವ ಮೂಲಕ ತಮ್ಮ ನಿರಾಸಕ್ತಿ ಪ್ರದರ್ಶಿಸುತ್ತಿರುತ್ತಾರೆ. ಮಹತ್ವದ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಶಾಸಕರುಗಳು ಹಿಂದೇಟು ಹಾಕುತ್ತಾರೆ. ಪ್ರತಿ ಬಾರಿಯೂ ಶಾಸಕರ ಹಾಜರಾತಿ ಅತ್ಯಲ್ಪವಾಗಿರುವುದು ಅಧಿವೇಶನದ ಸಾಮಾನ್ಯ ನೋಟವಾಗಿದೆ. ಈ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು. ಟಿ ಖಾದರ್ ಹೊಸ ಹೊಸ ಪ್ರಯೋಗಗಳ ಮೊರೆ ಹೋಗುತ್ತಿದ್ದಾರೆ.
ಕಳೆದ ಬಾರಿಯ ಅಧಿವೇಶನದಲ್ಲಿ ಶಾಸಕರ ಸಕಾಲ ಹಾಜರಾತಿ ಹೆಚ್ಚಿಸಲು ಉಚಿತ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ಮಧ್ಯಾಹ್ನ ಶಾಸಕರಿಗೆ ರುಚಿಕರವಾದ ಭೋಜನ ವ್ಯವಸ್ಥೆ ಮಾಡಿದ್ದಾರೆ. ಇದೀಗ ಸ್ಪೀಕರ್ ಯು. ಟಿ ಖಾದರ್ ಮತ್ತೊಂದು ಹೊಸ ಪ್ರಯೋಗದ ಮೊರೆ ಹೋಗಿದ್ದಾರೆ.
ಕಿರು ನಿದ್ರೆಗಾಗಿ ವಿಶೇಷ ಖುರ್ಚಿ ವ್ಯವಸ್ಥೆ:ಉಪಹಾರ, ಭೋಜನದ ಬಳಿಕ ಶಾಸಕರಿಗಾಗಿ ಮಧ್ಯಾಹ್ನದ ಕಿರು ನಿದ್ರೆ ಮಾಡುವ ಸಲುವಾಗಿ ವಿಶೇಷ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ಯು. ಟಿ ಖಾದರ್ ವಿಧಾನಸಭೆಯ ಮೊಗಸಾಲೆಯಲ್ಲಿ ರಿಕ್ಲೈನರ್ ಸೋಫಾ ಸೆಟ್ನ ವ್ಯವಸ್ಥೆ ಮಾಡುತ್ತಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ಈ ವಿಲಾಸಿ ಖುರ್ಚಿಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಅಳವಡಿಸಲಾಗಿದೆ.
''ಮುಂದೆ ಈ ರೀತಿಯ ಇನ್ನಷ್ಟು ಖುರ್ಚಿಯನ್ನು ಮೊಗಸಾಲೆಯಲ್ಲಿ ಹಾಕಲಾಗುವುದು, ಮಧ್ಯಾಹ್ನದ ಭೋಜನದ ಬಳಿಕ ಹಲವರು ಕಿರು ನಿದ್ರೆಗೆ ಹೋಗುತ್ತಾರೆ. ಈ ಕಿರು ನಿದ್ದೆಗೆ ಶಾಸಕರು ಹೊರ ಹೋಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲೇ ವಿಶೇಷ ಸೋಫಾಸೆಟ್ನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ'' ಎಂದು ಸ್ಪೀಕರ್ ಯು. ಟಿ ಖಾದರ್ ತಿಳಿಸಿದ್ದಾರೆ.