ಕರ್ನಾಟಕ

karnataka

ETV Bharat / state

ದೇವರಬೆಳಕೆರೆ ಮೈಲಾರಲಿಂಗೇಶ್ವರ ಜಾತ್ರೆ: ಸರಪಳಿ ಪವಾಡ ಕಣ್ತುಂಬಿಕೊಂಡ ಭಕ್ತರು

ದಾವಣಗೆರೆ ಜಿಲ್ಲೆಯ ದೇವರಬೆಳಕೆರೆ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ನಡೆದ ಸರಪಳಿ ಪವಾಡವನ್ನು ಭಕ್ತರು ಕಣ್ತುಂಬಿಕೊಂಡರು.

Mylara Lingeshwara Temple  Chain miracle  ದೇವರಬೆಳಕೆರೆ ಮೈಲಾರಲಿಂಗೇಶ್ವರನ ಸನ್ನಿಧಿ  ಸರಪಳಿ ಪವಾಡ  ಗೊರವಯ್ಯನಿಂದ ಸರಪಳಿ ಪವಾಡ
ದೇವರಬೆಳಕೆರೆ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಸರಪಳಿ ಪವಾಡ ಕಣ್ತುಂಬಿಕೊಂಡ ಭಕ್ತರು

By ETV Bharat Karnataka Team

Published : Mar 2, 2024, 11:02 AM IST

Updated : Mar 2, 2024, 3:27 PM IST

ದೇವರಬೆಳಕೆರೆ ಮೈಲಾರಲಿಂಗೇಶ್ವರ ಜಾತ್ರೆ

ದಾವಣಗೆರೆ:ತಂತ್ರಜ್ಞಾನ ಯುಗದಲ್ಲಿ ಪುರಾತನ ಆಚಾರ, ವಿಚಾರಗಳು ಇಂದಿಗೂ ಕೂಡ ಚಾಲ್ತಿಯಲ್ಲಿವೆ. 11 ದಿನಗಳವರೆಗೆ ಉಪವಾಸವಿದ್ದು, ಗೊರವಯ್ಯ ಕಬ್ಬಿಣದ ಸರಪಳಿ ತುಂಡು ಮಾಡಿ, ಕೈಕಾಲಿಗೆ ಸಲಾಕೆ ಚುಚ್ಚಿಕೊಳ್ಳುವ ವಿಶೇಷ ಆಚರಣೆ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಇದು ಮೈಲಾರಲಿಂಗೇಶ್ವರನ ಪವಾಡ ಎಂಬ ನಂಬಿಕೆ ಭಕ್ತರಲ್ಲಿದೆ. ಭರತ ಹುಣ್ಣಿಮೆ ನಂತರ ನಡೆಯುವ ಮೈಲಾರಲಿಂಗೇಶ್ವನ ಜಾತ್ರೆಯಲ್ಲಿ ಈ ಬಾರಿ ಶಸ್ತ್ರ ಪವಾಡ ಕಾರಣಾಂತರಗಳಿಂದ ಜರುಗಲಿಲ್ಲ. ಬದಲಿಗೆ ಗೊರವಯ್ಯ ಸರಪಳಿಯನ್ನು ತುಂಡರಿಸುವ ಪವಾಡವನ್ನು ಭಕ್ತರು ಕಣ್ತುಂಬಿಕೊಂಡರು.

ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಅದ್ಧೂರಿಯಾಗಿ ಮೈಲಾರಲಿಂಗೇಶ್ವರ ಜಾತ್ರೆ ನೆರವೇರಿತು. ದೇವಲೋಕದ ಕಾರುಣ್ಯ ಪುರುಷ ಮೈಲಾರಲಿಂಗೇಶ್ವರ ಇಲ್ಲಿ ಉದ್ಭವಿಸಿದ್ದರಿಂದ ಈ ಪುಣ್ಯ ಕ್ಷೇತ್ರದಲ್ಲಿ ಹಲವು ಪವಾಡಗಳು ನಡೆಯುತ್ತವೆ. ಪವಾಡ ಪುರುಷ ಮೈಲಾರಲಿಂಗೇಶ್ವರ ನೆಲೆಸಿದ್ದರಿಂದ ಈ ಗ್ರಾಮಕ್ಕೆ ದೇವರಬೆಳಕೆರೆ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಭರತ ಹುಣ್ಣಿಮೆ ನಂತರ ಹಾಗೂ ಮೈಲಾರದ ಜಾತ್ರೆಯ ಕಾರ್ಣಿಕ ಹೇಳಿದ ಬಳಿಕ ಎರಡನೇ ಮೈಲಾರ ಎಂದೇ ಖ್ಯಾತಿ ಗಳಿಸಿರುವ ದೇವರಬೆಳಕೆರೆಯ ಮೈಲಾರಲಿಂಗೇಶ್ವರನ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ.

ಎರಡನೇ ದಿನದ ಜಾತ್ರೆಯಲ್ಲಿ ನಡೆಯುವ ಶಸ್ತ್ರ ಪವಾಡವನ್ನು ನೋಡಲು ಸುತ್ತಮುತ್ತಲಿನ ಊರುಗಳಿಂದ ಮತ್ತು ರಾಜ್ಯದ ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. 11 ದಿನಗಳವರೆಗೆ ಉಪವಾಸ ಇರುವ ಗೊರವಯ್ಯ ಜಾತ್ರೆಯಲ್ಲಿ ಹಲವು ಪವಾಡಗಳನ್ನು ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಗೊರವಯ್ಯನವರ ಪೂರ್ವಜರು ಶಿರವನ್ನು ಕತ್ತರಿಸಿ, ಬಾಳೆ ಎಲೆ ಮೇಲೆ ಇಟ್ಟು ದೇವರಿಗೆ ಪೂಜೆ ನೆರವೇರಿಸುವ ಮೂಲಕ ಪವಾಡ ಮಾಡುತ್ತಿದ್ದರಂತೆ. ಇದೀಗ ಕೈ ಮತ್ತು ಕಾಲುಗಳಿಗೆ ಶಸ್ತ್ರ ಚುಚ್ಚಿಕೊಳ್ಳುವ ಮೂಲಕ ಮೈಲಾರ ಜಾತ್ರೆಯಲ್ಲಿ ಪವಾಡ ಮಾಡುತ್ತಿದ್ದರು. ಆದರೆ, ಈ ಬಾರಿ ಕಾರಣಾಂತರಗಳಿಂದ ಶಸ್ತ್ರ ಪವಾಡ ನೆರವೇರಿಸದೆ ಇರುವುದಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದರು.

ಗೊರವಯ್ಯನಿಂದ ಸರಪಳಿ ಪವಾಡ:ಸರಪಳಿ ಪವಾಡ ಮಾಡಿದ ಗೊರವಯ್ಯ ಭಾಸ್ಕರ ಗಣಚಾರಿ ಪ್ರತಿಕ್ರಿಯಿಸಿ, ''ಸರಪಳಿ ಪವಾಡವನ್ನು ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದೇವೆ. ಸರಪಳಿ ತುಂಡರಿಸುವ ಪವಾಡ ಮಾಡುವ ಮೂಲಕ ತುಂಡಾಗಿರುವ ಸರಪಳಿಯ ಒಂದು ಭಾಗವನ್ನು ತೆಗೆದು, ಗಂಗೆ ಕೂರಿಸಿ ಹೊಸ ಸರಪಳಿ ಜೋಡಿಸುತ್ತೇವೆ. ನಮ್ಮ ಮನೆತನದವರು ಮಾತ್ರ ಈ ಸರಪಳಿ ಪವಾಡವನ್ನು ಮಾಡುತ್ತಾರೆ. ಮೈಲಾರದಲ್ಲಿ ಹೊರತುಪಡಿಸಿದರೆ, ಸರಪಳಿ ಪವಾಡ ದೇವರಬೆಳಕೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನುರಿನಲ್ಲಿ ನಡೆಯುತ್ತದೆ'' ಎಂದು ತಿಳಿಸಿದರು.

ಪವಾಡ ಕಣ್ತುಂಬಿಕೊಂಡ ಭಕ್ತರು:ಮೂರು ದಿನಗಳವರೆಗೆ ಜರುಗುವ ಈ ಮೈಲಾರಲಿಂಗೇಶ್ವರ ಜಾತ್ರೆಗೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ಬೆಂಗಳೂರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೊದಲ ದಿನ ರಥೋತ್ಸವ ನಡೆಯುತ್ತದೆ. ಎರಡನೇ ದಿನ ಗೊರವಯ್ಯರ ಶಸ್ತ್ರ ಪವಾಡ ಇರುತ್ತದೆ. ಈ ಜಾತ್ರೆಗೆ ಆಗಮಿಸಿ ಯಾವುದೇ ಹರಕೆ ಹೊತ್ತರೂ ಮರುಜಾತ್ರೆಯ ವೇಳೆಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್​ನ ಅಧ್ಯಕ್ಷ ರುದ್ರಪ್ಪ ಪ್ರತಿಕ್ರಿಯಿಸಿ, "ಗೊರವಯ್ಯನವರ ಸಂಸಾರದಲ್ಲಿ 12 ವರ್ಷದ ಒಲೆ ಬಂದಿದ್ದರಿಂದ ಈ ಬಾರಿ ಶಸ್ತ್ರ ಪವಾಡ ಮಾಡಲಾಗಲಿಲ್ಲ. ಕಾಲಿಗೆ ಕೈಗೆ ಚುಚ್ಚಿಕೊಳ್ಳುವ ಶಸ್ತ್ರ ಪವಾಡ ನೆರವೇರಿಸಿಲ್ಲ. ಗೊರವಯ್ಯನಿಂದ ಸರಪಳಿ ತುಂಡರಿಸುವ ಪವಾಡ ನಡೆದಿದೆ. ಇದನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಭಕ್ತರು ಆಗಮಿಸಿದ್ದಾರೆ'' ಎಂದರು.

ಇದನ್ನೂ ಓದಿ:ಭದ್ರಾವತಿ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ

Last Updated : Mar 2, 2024, 3:27 PM IST

ABOUT THE AUTHOR

...view details