ಕರ್ನಾಟಕ

karnataka

ಸಿಇಟಿ, ನೀಟ್: ನೈಜ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ - CET NEET

By ETV Bharat Karnataka Team

Published : Aug 29, 2024, 10:52 PM IST

ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿ ಸಂಬಂಧ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದೆ.

KEA
KEA (ETV Bharat)

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ರಾತ್ರಿ ತನ್ನ ವೆಬ್ ಸೈಟ್​​ನಲ್ಲಿ ಪ್ರಕಟಿಸಿದೆ.

ಫಲಿತಾಂಶ ಕುರಿತು ನಿರ್ದಿಷ್ಟವಾದ ಆಕ್ಷೇಪಣೆಗಳಿದ್ದಲ್ಲಿ ಮಾತ್ರ, ಅಂದರೆ ಆಪ್ಶನ್ ದಾಖಲಿಸಿದ್ದರೂ ಸೀಟು ಹಂಚಿಕೆಯಾಗದಿರುವ ಇತ್ಯಾದಿ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆ.30ರ ಮಧ್ಯಾಹ್ನ 12 ಗಂಟೆ ಒಳಗೆ ಇ-ಮೇಲ್ (keaauthority-ka@nic.in) ಕಳುಹಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಕ್ಷೇಪಣೆಗಳನ್ನು ಪರಿಶೀಲಿಸಿ, ನೈಜವಾಗಿದ್ದರೆ ಮಾತ್ರ ಪರಿಗಣಿಸಲಾಗುತ್ತದೆ. ಬಳಿಕ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ವಿವಿಧ ನಾಲ್ಕು ಚಾಯ್ಸ್​​ಗಳನ್ನು ನೀಡಲಾಗುವುದು ಎಂದು ವಿವರಿಸಿದ್ದಾರೆ.

ಕೆಸೆಟ್: ಅರ್ಜಿ ಸಲ್ಲಿಸಲು ಸೆ.2ರ ವರೆಗೆ ಅವಕಾಶ:
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-24) ಗೆ ಅರ್ಜಿ ಸಲ್ಲಿಸಲು ಸೆ.2 ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಸೆ.3 ಕೊನೆ ದಿನ ಎಂದು ಪ್ರಸನ್ನ ತಿಳಿಸಿದ್ದಾರೆ.

ಡಿಸಿಇಟಿ: ಡಿಪ್ಲೋಮಾ ಅಭ್ಯರ್ಥಿಗಳಿಗೆ 2024ನೇ ಸಾಲಿನ ಜುಲೈ ತಿಂಗಳಲ್ಲಿ ನಡೆದ ಮೇಕ್ ಅಪ್ (ಮರು ಪರೀಕ್ಷೆ) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಡಿಪ್ಲೋಮಾ ಅಭ್ಯರ್ಥಿಗಳು ಡಿಸಿಇಟಿ-2024 ಗೆ ಹಾಜರಾಗಿದ್ದಲ್ಲಿ, ಡಿಸಿಇಟಿ-2024ರ ಎರಡನೇ ಸುತ್ತಿನ ನಂತರ ಉಳಿದಿರುವ ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಟರ್ ಸೀಟುಗಳಿಗೆ ಪ್ರವೇಶಾತಿಗೆ ಪರಿಗಣಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರವು ಜುಲೈ 2024ರ ಮೇಕ್ ಅಪ್ (ಮರು ಪರೀಕ್ಷೆ) ಪರೀಕ್ಷೆಯಲ್ಲಿ ಅರ್ಹತೆ ಪಡೆದು ಡಿಸಿಇಟಿ-2024 ರ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳಿಗೆ ರ್ಯಾಂಕ್ ಅನ್ನು ನೀಡಿ ಇತರೆ ಅರ್ಹ ಅಭ್ಯರ್ಥಿಗಳೊಂದಿಗೆ ಎರಡನೇ ಸುತ್ತಿನ ನಂತರ ಲಭ್ಯವಿರುವ ಸೀಟುಗಳ ಪ್ರವೇಶಾತಿಗೆ ಕ್ಯಾಶುಯಲ್ ತೆರವು ಹಂತದ ಸೀಟು ಹಂಚಿಕೆ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸದರಿ ಸೀಟು ಹಂಚಿಕೆಯ ಪ್ರಕ್ರಿಯೆಗಳಿಗೆ ಅಭ್ಯರ್ಥಿಗಳು ಪಾಲಿಸಬೇಕಾದ ಮಾರ್ಗದರ್ಶನಗಳನ್ನು ಸದ್ಯದಲ್ಲಿಯೇ ಪ್ರಾಧಿಕಾರದ ವೆಬ್‌ ಸೈಟಿನಲ್ಲಿ ಪ್ರಕಟಿಸಲಾಗುವುದು. ನವೀಕೃತ ಮಾಹಿತಿಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟಿಗೆ ಭೇಟಿ ನೀಡುತ್ತಿರುವಂತೆ ಸೂಚಿಸಿದೆ.

ಮೊದಲನೇ ಹಾಗೂ ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಪಡೆಯದ ಅಭ್ಯರ್ಥಿಗಳು ಮತ್ತು ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳು ಮಾತ್ರ ಕ್ಯಾಶುಯಲ್ ತೆರವು ಹಂತದ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಮೊದಲನೇ ಅಥವಾ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಶುಲ್ಕ ಪಾವತಿಸಿದ ನಂತರ ಪ್ರವೇಶವನ್ನು ರದ್ದು ಪಡಿಸಿಕೊಂಡಿರುವ ಅಭ್ಯರ್ಥಿಗಳನ್ನು ಈ ಸುತ್ತಿಗೆ ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.

ಸರ್ಕಾರದ ತೀರ್ಮಾನದಂತೆ ಕ್ಯಾಶುಯಲ್ ತೆರವು ಹಂತದ ಸೀಟು ಹಂಚಿಕೆಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೊದಲನೇ ಅಥವಾ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಳ್ಳಲು ಅಪೇಕ್ಷಿಸಿದಲ್ಲಿ, ದಿನಾಂಕ 02-09-2024 ರೊಳಗೆ ಆನ್‌ಲೈನ್ ಮೂಲಕ ಸೀಟನ್ನು ರದ್ದುಪಡಿಸಿಕೊಳ್ಳಬಹುದಾಗಿದೆ. ಅಂತಹ ಅಭ್ಯರ್ಥಿಗಳಿಗೆ ನಿಯಮಾನುಸಾರ 5,000 ರೂ ಕಟಾವು ಮಾಡಿ ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದು ಪಡಿಸಿಕೊಂಡಿರುವ ಅಭ್ಯರ್ಥಿಗಳಿಗೂ ಸಹ 5,000 ರೂ. ಕಟಾವು ಮಾಡಿ ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಒಂದು ವೇಳೆ ಕ್ಯಾಶುಯಲ್ ತೆರವು ಹಂತದ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿಕೊಂಡಲ್ಲಿ, ಅಂತಹ ಅಭ್ಯರ್ಥಿಗಳು ಸರ್ಕಾರದ ನಿಯಮ Karnataka Selection of Candidates for Admission to Government Seats in Professional Educational Institutions (Amendment) Rules, 2020 ನಿಯ 12 ರಂತೆ ಮೊದಲ ವರ್ಷದ ಶುಲ್ಕ ಮತ್ತು ಐದು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ (ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ) ಪಾವತಿಸಿ ಸೀಟನ್ನು ರದ್ದು ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ತಾವು ಉದ್ಘಾಟಿಸಿದ್ದ ಉರಿ ಜಲ ವಿದ್ಯುತ್ ಘಟಕಕ್ಕೆ ದೇವೇಗೌಡ ಭೇಟಿ : ಶ್ರೀನಗರ - ಬಾರಾಮುಲ್ಲಾ ರೈಲಿನಲ್ಲಿ ಹೆಚ್​ಡಿಡಿ ಪ್ರಯಾಣ - H D DEVEGOWDA

ABOUT THE AUTHOR

...view details