ಬೆಂಗಳೂರು:ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಘಟನೆಯ ದಿನ ನಟ ದರ್ಶನ್ ಮತ್ತು ಸಹವರ್ತಿಗಳು ಸಂಚರಿಸಿರುವ ಮಾರ್ಗದ ಸಿಸಿಟಿವಿ ದೃಶ್ಯಗಳನ್ನ ಕಲೆಹಾಕಿ, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ಸಿಐಡಿಯ ತಾಂತ್ರಿಕ ಘಟಕಕ್ಕೆ ರವಾನಿಸಿದ್ದಾರೆ.
ಆರೋಪಿಗಳು ಪಾರ್ಟಿ ಮಾಡಿದ್ದ ಆರ್. ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಿಂದ ಪಟ್ಟಣಗೆರೆ ಶೆಡ್ ಮಾರ್ಗದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು, ಪಟ್ಟಣಗೆರೆ ಶೆಡ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು, ಮೃತದೇಹ ಸಾಗಿಸಿದ್ದಾರೆನ್ನಲಾದ ಸುಮನಹಳ್ಳಿ ರಾಜಕಾಲುವೆ ಮಾರ್ಗದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಕಲೆ ಹಾಕಲಾಗಿದೆ. ಅಲ್ಲದೆ ದರ್ಶನ್, ಪವಿತ್ರಾಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಮನೆಗಳು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಇದುವರೆಗೂ 30ಕ್ಕೂ ಅಧಿಕ ಸಿಸಿಟಿವಿಗಳ ದೃಶ್ಯಾವಳಿಗಳನ್ನ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.