ಬೆಂಗಳೂರು: ಮಾಟ್ರಿಮೋನಿ ಮೂಲಕ ಸಂಗಾತಿಯನ್ನು ಹುಡುಕಿ ಎರಡನೇ ವಿವಾಹವಾಗಿದ್ದ ವೃದ್ಧನಿಗೆ ಏಳು ಮದುವೆಯಾಗಿರುವ ಪತ್ನಿಯೇ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಂಚನೆಗೊಳಗಾದ ರಾಮಕೃಷ್ಣ ಎಂಬುವರು ನೀಡಿದ ದೂರು ಆಧರಿಸಿ ಪತ್ನಿ ಜಯಲಕ್ಷ್ಮೀ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಗಣಪತಿ ನಗರದಲ್ಲಿ ವಾಸವಾಗಿರುವ 62 ವರ್ಷದ ರಾಮಕೃಷ್ಣ ಅವರು ಖಾಸಗಿ ಕಂಪೆನಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಎರಡನೇ ಮದುವೆಗಾಗಿ ಮ್ಯಾಟ್ರಿಮೋನಿಯಲ್ಲಿ ಸಂಗಾತಿ ಹುಡುಕುವಾಗ ಜಯಲಕ್ಷ್ಮೀ ಪರಿಚಯವಾಗಿದ್ದು, ಗುರು-ಹಿರಿಯರ ನಿಶ್ಚಯದಂತೆ 2020ರಲ್ಲಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಫ್ ಹಣ ಕಬಳಿಸಲು ಯತ್ನ :ವಿವಾಹವಾದ ಕೆಲ ದಿನಗಳ ಬಳಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ರಾಮಕೃಷ್ಣ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ನ್ಯಾಯಾಲಯಕ್ಕೆ ಬಿ ರಿಪೋರ್ಟ್ ನೀಡಿದ್ದರು. ಇತ್ತೀಚೆಗೆ ತನ್ನ ಭವಿಷ್ಯನಿಧಿ (ಪಿಎಫ್) ಖಾತೆಯಲ್ಲಿ ಹಣ ಕಬಳಿಸಲು ವಿಜಯಲಕ್ಷ್ಮೀ ಸಂಚು ರೂಪಿಸಿದ್ದಳು. ಹಣ ನೀಡುವಂತೆ ಪ್ರತಿ ದಿನ ಮಾನಸಿಕ ಹಾಗೂ ಕಿರುಕುಳ ನೀಡುತ್ತಿದ್ದಳು. ಅಲ್ಲದೆ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರುದಾರರು ಆರೋಪಿಸಿದ್ದಾರೆ.