ಬೆಳಗಾವಿ:ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಿ 2020-21ರಲ್ಲಿ ಆರ್‌ಟಿಇ ಅಲ್ಲದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಅನುದಾನರಹಿತ ಖಾಸಗಿ ಶಾಲೆಗಳು ₹345.80 ಕೋಟಿ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿವೆ ಎಂದು ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ 'ಕಾರ್ಯವೈಖರಿ' ಎಂಬ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಧಾನಸಭೆಯಲ್ಲಿ ಮಂಡಿಸಲಾದ ವರದಿಯಲ್ಲಿ, 'ಶಾಲೆಗಳು 2019-20ನೇ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿಗಳಿಂದ ಶೇಕಡಾ 85ರಷ್ಟು ಶುಲ್ಕವನ್ನು ಮಾತ್ರ ಸಂಗ್ರಹಿಸಬೇಕಾಗಿತ್ತು. ಆದರೆ, ಹಲವು ಅನುದಾನರಹಿತ ಶಾಲೆಗಳು ಸೂಚನೆಗಳನ್ನು ಪಾಲಿಸಿರಲಿಲ್ಲ. 2020-21ರ ಅವಧಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಂದ ₹345.80 ಕೋಟಿ ಹೆಚ್ಚುವರಿ ಶುಲ್ಕ ವಿಧಿಸಿವೆ. ಆರ್‌ಟಿಇ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಅನುದಾನರಹಿತ ಖಾಸಗಿ ಶಾಲೆಗಳು ಕ್ಲೇಮ್ ಮಾಡಿದ ₹7.07 ಕೋಟಿ ಹೆಚ್ಚುವರಿ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡಿದೆ'. ಹಲವಾರು ನಿದರ್ಶನಗಳಲ್ಲಿ ಶಿಕ್ಷಣ ಸಂಸ್ಥೆಗಳ ಮಾನ್ಯತೆಯ ನವೀಕರಣದಲ್ಲಿನ ವಿಳಂಬದಿಂದ ಸಂಸ್ಥೆಗಳು ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸಲು ಕಾರಣವಾಯಿತು. ಇದು ಶಾಲೆಯ ಪರಿಸರದ ಸುರಕ್ಷತೆಯನ್ನು ರಾಜಿ ಮಾಡಿಕೊಂಡಂತಾಗಿದೆ' ಎಂದು ವರದಿ ತಿಳಿಸಿದೆ.
ಸರ್ಕಾರಿ ಇಲಾಖೆಗಳಿಂದ ನಡೆಸಲ್ಪಡುವ ಶಾಲೆಗಳನ್ನು ನಿಯಂತ್ರಣ ಪ್ರಕ್ರಿಯೆಗೆ ಒಳಪಡಿಸಲಾಗಿಲ್ಲ. ಇದರ ಪರಿಣಾಮವಾಗಿ ಮೂಲಸೌಕರ್ಯ ಮತ್ತು ಬೋಧನಾ ಸೌಲಭ್ಯಗಳ ವ್ಯವಸ್ಥಿತ ಮೌಲ್ಯಮಾಪನವನ್ನು ನಿಯಮಿತ ಮಧ್ಯಂತರದಲ್ಲಿ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದೆ.