ಕರ್ನಾಟಕ

karnataka

ETV Bharat / state

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ - Ramanagara rename - RAMANAGARA RENAME

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ನಾಮಕರಣ ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.

Chief Minister Siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Jul 26, 2024, 4:25 PM IST

Updated : Jul 26, 2024, 6:49 PM IST

ಬೆಂಗಳೂರು :ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಾಯಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಾಯಿಸಲು ತೀರ್ಮಾನಿಸಲಾಗಿದೆ.

ಹೆಸರು ಮಾತ್ರ ಬದಲಾಗುತ್ತಿದ್ದು, ಆಡಳಿತಾತ್ಮಕವಾಗಿ ಯಾವುದೇ ಬದಲಾವಣೆ ಮಾಡುವುದಿಲ್ಲ. ರಾಮನಗರ ಬೆಂಗಳೂರಿನ ಭಾಗವಾಗಿದೆ. ಬ್ರಾಂಡ್ ಬೆಂಗಳೂರು ಅಡಿ ಬರಬೇಕು ಎಂದು ಹಲವರ ಇಚ್ಛೆ ಇದೆ. ಜನರ ಬೇಡಿಕೆ, ಅಪೇಕ್ಷೆಯ ಅನುಸಾರವಾಗಿ ಈ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಜು.9 ರಂದು ಡಿಸಿಎಂ ಡಿ. ಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿ, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿತ್ತು.

ಮನವಿ ಪತ್ರದಲ್ಲಿ ಮೊದಲು ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು.

1986ರ ಸಾಲಿನಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಿಸಲಾಯಿತು ಎಂದು ತಿಳಿಸಿದ್ದರು‌. ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕುಗಳನ್ನು ಸೇರಿಸಿಕೊಂಡು ಹೊಸದಾಗಿ ರಾಮನಗರ ಜಿಲ್ಲೆಯನ್ನಾಗಿ 2007ರಲ್ಲಿ ಘೋಷಿಸಿ, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲಾಯಿತು ಎಂದು ಮನವಿ ಪತ್ರದಲ್ಲಿ ಕೋರಿದ್ದರು.

ಪ್ರಸ್ತುತ, ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನಮ್ಮ ಚಿಂತನೆಯೂ ಕೂಡ. ಆದ್ದರಿಂದ, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲು ಕೋರಿ ಮನವಿ ಪತ್ರ ಸಲ್ಲಿಸಿದ್ದರು.

ಹೆಚ್. ಡಿ ಕುಮಾರಸ್ವಾಮಿ ರಾಮನಗರ ಹೆಸರು ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೆಸರು ಬದಲಾವಣೆ ಮಾಡಿದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇತ್ತ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಹೊಸ್ತಿಲಲ್ಲಿ ಇದ್ದು, ಇದರ ಬೆನ್ನಲ್ಲೇ ಹೆಸರು ಬದಲಾವಣೆ ಮಾಡಿರುವುದು ರಾಜಕೀಯ ಗುದ್ದಾಟಕ್ಕೆ ಕಾರಣವಾಗಲಿದೆ. ಅಜೆಂಡಾದಲ್ಲಿ ಇಲ್ಲದಿದ್ದರೂ ಕೊನೆ ಕ್ಷಣದಲ್ಲಿ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರವನ್ನು ಸಂಪುಟ ಸಭೆ ಮುಂದಿಟ್ಟು, ತೀರ್ಮಾನಿಸಲಾಗಿದೆ.

ಇದನ್ನೂ ಓದಿ :ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ವಿಶ್ವ ಮಟ್ಟದಲ್ಲಿ ಹೆಸರು ಬರಲಿದೆ: ಡಿಸಿಎಂ ಡಿ ಕೆ ಶಿವಕುಮಾರ್ - DCM DK SHIVAKUMAR

Last Updated : Jul 26, 2024, 6:49 PM IST

ABOUT THE AUTHOR

...view details