ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ಯಾವ ಅಂಕಿಅಂಶವನ್ನು ಪರಿಗಣಿಸಬೇಕು ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, "ಒಳಮೀಸಲಾತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ. ಸುಪ್ರೀಂ ಕೋರ್ಟ್ ಎಸ್ಸಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಒಳಮೀಸಲಾತಿ ಕಲ್ಪಿಸಲು ತೀರ್ಮಾನಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಿ, ಯಾವ ದತ್ತಾಂಶ ಪಡೆಯಬೇಕು ಎಂದು ಪರಿಶೀಲಿಸಿ ಮೂರು ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ" ಎಂದರು.
ಮುಂದಿನ ನೇಮಕಾತಿಗಳಿಗೆ ತಡೆ:"ಆಯೋಗದ ವರದಿ ಬರುವ ತನಕ ಮುಂದಿನ ಎಲ್ಲ ನೇಮಕಾತಿಯನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ನೇಮಕಾತಿ ಅಧಿಸೂಚನೆಯನ್ನು ತಡೆಹಿಡಿಯಲು ತೀರ್ಮಾನಿಸಲಾಗಿದೆ. ಆಯೋಗ ವರದಿ ಸಲ್ಲಿಸುವ ತನಕ ನೇಮಕಾತಿಯನ್ನು ತಡೆಹಿಡಿಯಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.
ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, "ಸದಾಶಿವ ಆಯೋಗ ವರದಿಯನ್ನು ಬಿಜೆಪಿ ಸರ್ಕಾರ ಕ್ಲೋಸ್ ಮಾಡಿದೆ. ಬಿಜೆಪಿ ಸರ್ಕಾರ ಸಂಪುಟ ಉಪಸಮಿತಿ ವರದಿ ಆಧಾರಿಸಿ ಒಳಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿದ್ದರು. ದಲಿತ ಪಂಗಡಗಳ ಎಲ್ಲಾ ವರ್ಗೀಕರಣ ಸಮೂಹದವರು ಒಳಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದಾರೆ. ಎಲ್ಲರೂ ಒಳಮೀಸಲಾತಿ ಕಲ್ಪಿಸಲು ಒಪ್ಪಿದ್ದಾರೆ. ಇದೇ ಮಾದರಿ ತೆಲಂಗಾಣ ಸರ್ಕಾರ ಒಳ ಮೀಸಲಾತಿಯನ್ನು ತೀರ್ಮಾನಿಸಿದೆ. ರಾಜ್ಯ ಸರ್ಕಾರ ಒಳಮೀಸಲಾತಿಗೆ ಬದ್ಧವಾಗಿದೆ" ಎಂದು ಹೇಳಿದರು.